ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಬಿ ವೈ ರಾಘವೇಂದ್ರ ಮನವಿ ಸಲ್ಲಿಕೆ

ಕುಂದಾಪುರ:ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಸಂಸದ ಬಿ. ವೈ.ರಾಘವೇಂದ್ರ ಅವರು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು.
ಸುಮಾರು 1200 ವರ್ಷಗಳ ಇತಿಹಾಸವನ್ನು ಹೊಂದಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ.ವಿವಿಧ ರಾಜ್ಯಗಳಿಂದ ಹಾಗೂ ಹೊರ ದೇಶಗಳಿಂದ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.
ಕ್ಷೇತ್ರದಲ್ಲಿ ಮೂಲಸೌಕರ್ಯದ ಜೊತೆಗೆ ಸೌಪರ್ಣಿಕಾ ನದಿ ಸ್ವಚ್ಛತೆ,ಶಂಕರಾಚಾರ್ಯ ಥೀಮ್ ಪಾರ್ಕ್,ಮಲ್ಟಿಲೆವೆಲ್ ಪಾರ್ಕಿಂಗ್,ವಿಮಾನ,ರೈಲ್ವೆ, ಬಸ್ ಹಾಗೂ ಬಂದರು ಸಂಪರ್ಕ,ಕೇಬಲ್ ಕಾರ್, ಬೈಂದೂರಿನ ಇತಿಹಾಸ ಪ್ರಸಿದ್ಧ ದೇವಸ್ಥಾಗಳ ರಸ್ತೆ ಸಂಪರ್ಕ, ಕಡಲ ತೀರ ಹಾಗೂ ಜಲಪಾತಗಳ ಅಭಿವೃದ್ಧಿ, ಪಂಚಗಂಗಾವಳಿ ನದಿ ಅಭಿವೃದ್ಧಿ ಸಹಿತ ಹಲವು ಯೋಜನೆಗಳನ್ನೊಳಗೊಂಡ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ಮಂಜೂರು ಮಾಡುವಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣ ಪ್ರಸಾದ ಅಡಯಂತಾಯ,ಬೈಂದೂರಿನ ವೆಂಕಟೇಶ್ ಕಿಣಿ ಅವರು ಉಪಸ್ಥಿತರಿದ್ದರು.ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ನಿರ್ಮಾಣದ ಬಗ್ಗೆ ಮಾನ್ಯ ಕೇಂದ್ರ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ.























































































































































































































































































































































































































































































































































































































































































































































































































































































































































































































































































































































































































































































































































































































































































