ಕ್ಷೇತ್ರದ ಮತದಾರರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ- ಬಿ.ವೈ. ರಾಘವೇಂದ್ರ

ಕುಂದಾಪುರ:ನಾಲ್ಕನೇ ಬಾರಿಗೆ ಸಂಸತ್ ಭವನ ಪ್ರವೇಶಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರು ಕ್ಷೇತ್ರದ ಮತದಾರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದರ ಮುಖೇನ ತನ್ನ ಗೆಲುವಿಗೆ ಕಾರಣಿಕರ್ತರಾದ ಕ್ಷೇತ್ರದ ಮತದಾರ ಬಂಧುಗಳಿಗೆ ವಿಭಿನ್ನ ರೀತಿಯಲ್ಲಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ತಮ್ಮ ಅತ್ಯಮೂಲ್ಯ ಮತಗಳನ್ನು ನೀಡಿ ಅಭೂತಪೂರ್ವ ದಿಗ್ವಿಜಯದ ಅಂಗಳಕ್ಕೆ ತಂದು ನಿಲ್ಲಿಸಿ ನನ್ನ ಮೇಲಿನ ಮಹತ್ತರ ಜವಾಬ್ದಾರಿಯನ್ನು ಹಾಗೂ ನೀವು ಇಟ್ಟಿರುವ ಅಪಾರ ನಂಬಿಕೆಯನ್ನು ಹಿಮ್ಮುಡಿಗೊಳಿಸಿದ್ದೀರಿ.
ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ತತ್ವವನ್ನು ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡು ನನ್ನ ಬಳಿ ಬರುವ ಪ್ರತಿಯೊಬ್ಬ ಜನಸಾಮಾನ್ಯರ ನಾಡಿ ಮಿಡಿತ ಅರಿಯುವಲ್ಲಿ ಸಫಲನಾಗಿದ್ದೇನೆ ಎಂಬ ಅಚಲ ವಿಶ್ವಾಸ ದ್ಯೋತಕವಾಗಿದೆ ಎಂಬ ಆಶಾಭಾವನೆ ಈ ಮೂಲಕ ದುಪ್ಪಟ್ಟಾಗಿದೆ ಎಂದು ಭಾವಿಸುತ್ತೇನೆ.ಜಿಲ್ಲೆಯನ್ನು ಎಲ್ಲಾ ರಂಗದಲ್ಲಿಯೂ ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿ ತಂದು ನಿಲ್ಲಿಸುವ ದೂರದೃಷ್ಟಿಯ ಆಲೋಚನೆ, ಅದರ ಎಡೆಗಿನ ಬದ್ಧತೆ, ನಿರಂತರ ಪರಿಶ್ರಮ ಎಂದಿಗೂ ನಿಲ್ಲದು. ಕ್ಷೇತ್ರದ ಸರ್ವ ಜನಾಂಗದ ಜನಸಾಮಾನ್ಯರ ಅಶೋತ್ತರಗಳಿಗೆ ಸ್ಪಂದನ ಮನೋಭಾವ ಎಂದಿಗೂ ನಿಲ್ಲದ ಪಯಣ ಅದು ನಿತ್ಯ ನಿರಂತರ.ನನ್ನ ಮೇಲೆ ಕ್ಷೇತ್ರದ ಮತದಾರ ದೇವರು ಇಟ್ಟಿರುವ ಪ್ರೀತಿ, ನಂಬಿಕೆ, ವಿಶ್ವಾಸ ಜೊತೆಗೆ ಇಲ್ಲಿಯವರೆಗೆ ನೀವು ನೀಡಿರುವ ಅತೀವ ಆತ್ಮಬಲ ಹಾಗೂ ಅತ್ಮಸ್ಥೈರ್ಯದ ಭಾಗವಾಗಿ ಇಂದು 18ನೇ ಲೋಕಸಭಾದ ಮೊದಲ ಅಧಿವೇಶನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನ ಪ್ರತಿನಿಧಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನಿಮ್ಮ ನಿರೀಕ್ಷೆಯ ದೋಣಿಯಲ್ಲಿ ಪ್ರಯಾಣ ಆರಂಭಿಸಿದ್ದೇನೆ.
ಈ ದೋಣಿಯ ಅಂಬಿಗನಾಗಿ ಸುದೀರ್ಘ ಪಯಣದಲ್ಲಿ ನಿಮ್ಮ ಆಶೀರ್ವಾದ ಸದಾ ಬೇಡುತ್ತೇನೆ. ಸೂಕ್ತ ಸಮಯದಲ್ಲಿ ಅಗತ್ಯ ಸಲಹೆ ಮತ್ತು ಸಹಕಾರ ನಿರೀಕ್ಷಿಸುತ್ತೇನೆ.ನಿಮ್ಮೊಂದಿಗೆ ಎಂದೆಂದಿಗೂ ಇರಬೇಕು ಎನ್ನುವ ನನ್ನ ಆತ್ಮಸಾಕ್ಷಿಗೆ ಕೈಜೋಡಿಸುವ ಮೂಲಕ ಹೆಚ್ಚಿನ ಬಲ ತುಂಬಬೇಕು ಎಂದು ವಿನಮ್ರ ಪೂರ್ವಕವಾಗಿ ತಮ್ಮಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.