ಗರಿಷ್ಠ ಪ್ರಮಾಣದಲ್ಲಿ ಪರಿಹಾರ ನೀಡಲು ಕ್ರಮ-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕುಂದಾಪುರ:ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಗರಿಷ್ಠ ಪ್ರಮಾಣದಲ್ಲಿ ಪರಿಹಾರವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಸರಕಾರ ಮೀನುಗಾರ ಕುಟುಂಬದವರ ಬೆನ್ನಿಗೆ ನಿಲ್ಲಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕುಂದಾಪುರ ತಾಲೂಕಿನ ಗಂಗೊಳ್ಳಿ ವಾರ್ಪ್ ಬಂದರಿನಲ್ಲಿ ಸಂಭವಿಸಿದ ಅಗ್ನಿ ದುರಂತ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿ ಮೀನುಗಾರರೊಂದಿಗೆ ಜತೆ ಮಾತನಾಡಿದರು.
ಈಗಾಗಲೇ ಸಂಬಂಧಿಸಿದ ಮಂತ್ರಿಗಳು,ಪಕ್ಷದ ನಾಯಕರುಗಳು,ಅಧಿಕಾರಿಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾದ ವರದಿಯನ್ನು ಸರಕಾರಕ್ಕೆ ನೀಡಿದ್ದಾರೆ.ಮತ್ತೊಮ್ಮೆ ವಾಸ್ತಾವಂಶವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತುರ್ತಾಗಿ ಪರಿಹಾರವನ್ನು ನೀಡುವಂತೆ ಕ್ರಮ ಕೈಗೊಳ್ಳಲಾಗುವುದು.ಅಗ್ನಿ ದುರಂತದಲ್ಲಿ ಜಿಲ್ಲಾಡಳಿತದ ಅಂದಾಜಿನ ಪ್ರಕಾರ 13 ರಿಂದ 14 ಕೋಟಿ ಅಷ್ಟು ನಷ್ಟ ಮೀನುಗಾರರ ಕುಟುಂಬಗಳಿಗೆ ಉಂಟಾಗಿದೆ.ಈ ರೀತಿ ಘಟನೆಗಳು ಆಗಿರುವಂತಹದ್ದು ಬಹಳ ವಿರಳ ಇಂತಹ ಘಟನೆಗಳು ಮರುಕಳಿಸದಂತೆ ಇರಲು ಮುಂಜಾಗೃತಾ ಕ್ರಮ ಅಗತ್ಯವಾಗಿದೆ.ಬಂದರು ಪ್ರದೇಶದಲ್ಲಿ ಫೈರ್ ಸ್ಟೇಷನ್,ಪಂಪ್ ಹೌಸ್ ನಿರ್ಮಾಣದ ಕಾರ್ಯಕ್ಕೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.ಗಂಗೊಳ್ಳಿ ಜೆಟ್ಟಿ ಕುಸಿತದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಬಂದರು ಇಲಾಖೆ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಜಿಲ್ಲಾಧಿಕಾರಿ ವಿದ್ಯಾಕುಮಾರಿ,ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್,ಕಾಂಗ್ರೆಸ್ ಪಕ್ಷದ ಮುಖಂಡರುಗಳು,ಮೀನುಗಾರರು ಉಪಸ್ಥಿತರಿದ್ದರು.