ಹಕ್ಲಾಡಿ:ಗುರುಗಳನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು-ಸಾಹಿತಿ ಕೆ.ರಘುರಾಮ ಶೆಟ್ಟಿ

ಕುಂದಾಪುರ:ಹಕ್ಲಾಡಿ ಸರಕಾರಿ ಪ್ರೌಢಶಾಲೆಯ 1981-82 ರ ಬ್ಯಾಚ್‍ನ ಹಳೆ ವಿದ್ಯಾರ್ಥಿಗಳ ವತಿಯಿಂದ ಮಿತ್ರ ಸಂಗಮ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಕ್ಲಾಡಿ ಪ್ರೌಢಶಾಲೆಯಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.
ಸಾಹಿತಿ ಹಾಗೂ ಪ್ರಸಂಗಕರ್ತರಾದ ನಿವೃತ್ತ ಶಿಕ್ಷಕ ಕೆ.ರಘುರಾಮ ಶೆಟ್ಟಿ ಉದ್ಘಾಟಿಸಿ ಮಾತನಾಡಿ,ತಂದೆ ತಾಯಿಯನ್ನು ಗೌರವ ಭಾವನೆಯಿಂದ ನೋಡಿದಂತೆ ಗುರುಗಳನ್ನು ಸಹ ಗೌರವಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು.ಗುರುಗಳು ಹೇಳಿದಂತಹ ವಿಚಾರಗಳನ್ನು ನಿತ್ಯವೂ ಅನುಷ್ಠಾನ ಮಾಡುವುದರಿಂದ ಉತ್ತಮವಾದ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಒಂದೆ ಶಾಲೆಯಲ್ಲಿ ಒಟ್ಟಾಗಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಸರಿ ಸುಮಾರು 42 ವರ್ಷಗಳ ಬಳಿಕ ಎಲ್ಲರೂ ಒಂದೇಡೆ ಸೇರಿ ನೆನಪಿಸಿಕೊಂಡು ತಮ್ಮ ನೆಚ್ಚಿನ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಮತ್ತು ವಿಶೇಷವಾದ ಸಂಗತಿ ಆಗಿದೆ ಎಂದರು.

ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ವಹಿಸಿದ್ದ ಹಳೆ ವಿದ್ಯಾರ್ಥಿ ಎಚ್.ಚಂದ್ರಶೇಖರ ಶೆಟ್ಟಿ ಮಾತನಾಡಿ,ಜಗತ್ತನ್ನು ಬದಲಾಯಿಸಬಲ್ಲ ಶಕ್ತಿ ಶಿಕ್ಷಣಕ್ಕೆ ಇದೆ ವಿದ್ಯೆಗೆ ಮಹತ್ವ ಕೊಟ್ಟಿದಷ್ಟು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬಹುದು ವಿದ್ಯಾವಂತ ಸಮಾಜ ಎಂದಿಗೂ ಜಾಗೃತ ಮನೋಭಾವದಿಂದ ಕೂಡಿರುತ್ತದೆ ಎಂದರು.ಶಿಕ್ಷಕರ ಉತ್ಸಾಹದ ಮಾತುಗಳು ಗೆಲುವಿನ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.


ನಿವೃತ್ತ ಶಿಕ್ಷಕಿ ಶ್ರೀಮತಿ ರೇವತಿ ಅವರು ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿ,ವಿದ್ಯಾರ್ಥಿಗಳ ಪ್ರೇಮವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯವಾದುದು,ಶಿಕ್ಷಕಿಯಾಗಿ ಈ ಊರಿಗೆ ಬಂದಂತಹ ಸಮಯದಲ್ಲಿ ಊರಿನವರು ಮತ್ತು ವಿದ್ಯಾರ್ಥಿಗಳ ಪೋಷಕರು ನೀಡಿದಂತ ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಹಕ್ಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಭಾಷ್ ಶೆಟ್ಟಿ ಮತ್ತು ತಾ.ಪಂ ಮಾಜಿ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ ಬಾಳೆಮನೆ ಹಕ್ಲಾಡಿ ಶುಭಹಾರೈಸಿದರು.ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ಸಂಗೀತ ಸಂತೋಷ ಮೊಗವೀರ,ಹಕ್ಲಾಡಿ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ದೇವಾಡಿಗ,ಗಣಪಯ್ಯ ಶೆಟ್ಟಿ,ಜಗದೀಶಯ್ಯ ಹಲ್ಸನಾಡು,ಹಕ್ಲಾಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ಎಸ್,ಗ್ರಾ.ಪಂ ಸದಸ್ಯರು,ಹಳೆ ವಿದ್ಯಾರ್ಥಿಗಳು,ಪೋಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿವೃತ್ತ ಉಪನ್ಯಾಸಕಿ ರೇವತಿ ಅವರಿಗೆ ಗುರುವಂದನೆಯನ್ನು ಹಳೆವಿದ್ಯಾರ್ಥಿಗಳು ಸಲ್ಲಿಸಿದರು.ಈ ಸಂದರ್ಭ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಶೆಟ್ಟಿ ಬಗ್ವಾಡಿ,ಎನ್.ಕರುಣಾಕರ ಶೆಟ್ಟಿ,ಕೆ.ಆನಂದ ಶೆಟ್ಟಿ,ಬಿ.ರಾಜೀವ ಶೆಟ್ಟಿ,ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸದಾಶಿವ ಶೆಟ್ಟಿ ಹಕ್ಲಾಡಿ ಹಾಗೂ ಕಂದಾವರ ರಘುರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.1981-82 ರಲ್ಲಿ ಹಕ್ಲಾಡಿ ಶಾಲೆ ಎದುರುಗಡೆ ಸೈಕಲ್‍ನಲ್ಲಿ ಐಸ್‍ಕ್ಯಾಂಡಿ ಮಾರುತ್ತಿದ್ದ ಐಸ್‍ಕ್ಯಾಂಡಿ ಕೇಶವಣ್ಣ ಅವರನ್ನು ಗೌರವಿಸಲಾಯಿತು.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವೈಷ್ಣವಿ ಚಿಕಿತ್ಸೆಗೆ ನೆರವನ್ನು ನೀಡಲಾಯಿತು.ಸರಕಾರಿ ಪ್ರೌಢಶಾಲೆಗೆ ಹಳೆ ವಿದ್ಯಾರ್ಥಿಗಳು 50,000.ರೂ ದೇಣಿಗೆಯನ್ನು ನೀಡಿದರು.ಶಾಲಾ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.ಶರತ್‍ಚಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗೋಪಾಲ ಶೆಟ್ಟಿ ಸ್ವಾಗತಿಸಿದರು.ಶೈಲಜಾ ಶೆಟ್ಟಿ ಬಳಗ ಪ್ರಾರ್ಥಿಸಿದರು.ಡಾ.ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ,ನಿರೂಪಿಸಿದರು.
