ಹೆಮ್ಮಾಡಿ:ಜನತಾ ಆವಿಷ್ಕಾರ್ 2ಕೆ23 ಕಾರ್ಯಕ್ರಮ ಉದ್ಘಾಟನೆ






ಕುಂದಾಪುರ:ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ 2ಕೆ23 ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ವಿಸ್ಮಯ,ವ್ಯವಹಾರ ಮೇಳ,ಜಾನಪದ ಹಬ್ಬ,ಚಿತ್ರ ಚಿತ್ತಾರ ಮತ್ತು ಭಾವ ಸಂಗಮ ಕಾರ್ಯಕ್ರಮ ಅದ್ದೂರಿಯಾಗಿ ಗುರುವಾರ ನಡೆಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಅವರು ಜನತಾ ಆವಿಷ್ಕಾರ್ 2ಕೆ23 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಬಡವರ ಮಕ್ಕಳಿಗೆ ಸಂಪೂರ್ಣವಾಗಿ ಶಿಕ್ಷಣ ದೊರಕಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ.ಮಕ್ಕಳ ಬುದ್ದಿ ಶಕ್ತಿಗೆ ಅನುಗುಣವಾಗಿ ಶಿಕ್ಷಣವನ್ನು ನೀಡಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು.ತಮ್ಮ ಪ್ರತಿಭೆಯನ್ನು ಹೊರಗೆ ತರಲು ಬಹುದೊಡ್ಡ ವೇದಿಕೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಅವಕಾಶವನ್ನು ಮಾಡಿಕೊಟ್ಟ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯ ಇತರರಿಗೂ ಮಾದರಿ ಆಗಿದೆ ಎಂದರು.


ಜನತಾ ಕಾಲೇಜಿನ ಪ್ರಿನ್ಸಿಪಾಲ್ ಗಣೇಶ ಮೊಗವೀರ ಮಾತನಾಡಿ,ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅವಕಾಶವನ್ನು ಒದಗಿಸಿಕೊಟ್ಟಾಗ ಮಾತ್ರ ಉತ್ತಮವಾದ ಶಿಕ್ಷಣವನ್ನು ಪಡೆಯಲು ಸಾದ್ಯವಿದೆ.ಕುಂದಾಪುರ ಮತ್ತು ಬೈಂದೂರು ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜನತಾ ಆವಿಷ್ಕಾರ್ ಎನ್ನುವ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುವ ಉದ್ದೇಶದಿಂದ ದೊಡ್ಡ ವೇದಿಕೆಯನ್ನು ಕಲ್ಪಿಸಲಾಗಿದೆ.ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.


ಕಿಯೋನಿಕ್ಸ್ ಕುಂದಾಪುರ ಹರ್ಷವರ್ಧನ ಶೆಟ್ಟಿ ಮಾತನಾಡಿ,ಸಣ್ಣ ಸಣ್ಣ ವಿಷಯಗಳಿಗೂ ಹೆಚ್ಚಿನ ಒತ್ತನ್ನು ನೀಡಿದಾಗ ಮಾತ್ರ ವ್ಯವಹಾರದಲ್ಲಿ ಆವಿಷ್ಕಾರವನ್ನು ಮಾಡಲು ಸಾಧ್ಯವಿದೆ.ಕೌಶಲ್ಯ ಎನ್ನುವುದು ಜಾಗತೀಕರಣದಂತಹ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾಗಿದೆ ಎಂದರು.
ಜನತಾ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಚಿತ್ರಾ ಕಾರಂತ ಮಾತನಾಡಿ,ವ್ಯವಹಾರ ಕ್ಷೇತ್ರದಲ್ಲಿ ತೊಡಗಿಕೊಳ್ಳುವವರಿಗೆ ತಾಳ್ಮೆ ಎನ್ನುವುದು ಅತಿ ಮುಖ್ಯವಾಗಿದೆ.ನಯ ವಿನಯತೆಯಿಂದ ವ್ಯವಹಾರ ಮಾಡಿದರೆ ಮಾತ್ರ ಗ್ರಾಹಕರ ಮನವನ್ನು ಗೆಲ್ಲಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.



ವಿ.ವಿ ಮಂಡಳಿ ಹೆಮ್ಮಾಡಿ ಮಾಧವ ಪೂಜಾರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದಯ ಕುಮಾರ್ ಹಟ್ಟಿಯಂಗಡಿ ಶುಭಹಾರೈಸಿದರು,ತಿಮ್ಮಪ್ಪ ಮೊಗವೀರ,ಜನತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜು ಕಾಳವಾರ,ಜನತಾ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರಮೇಶ ಪೂಜಾರಿ ಉಪಸ್ಥಿತರಿದ್ದರು.ಜನತಾ ಕಾಲೇಜಿನ ಅಧ್ಯಕ್ಷರಾದ ಪ್ರಿನ್ಸಿಪಾಲ್ ಗಣೇಶ ಮೊಗವೀರ ಸ್ವಾಗತಿಸಿದರು.ಉಪನ್ಯಾಸಕ ಉದಯ ನಾಯ್ಕ್ ನಿರೂಪಿಸಿದರು.ವಾಣಿಜ್ಯ ಉಪನ್ಯಾಸಕಿ ಜ್ಯೋತಿ ಮೊಗವೀರ ವಂದಿಸಿದರು.ಬೈಂದೂರು ಮತ್ತು ಕುಂದಾಪುರ ತಾಲೂಕಿನ ಸುಮಾರು 25ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.17 ಕ್ಕೂ ಹಚ್ಚಿನ ಸ್ಟಾಲ್‍ಗಳಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಆವಿಷ್ಕರಾದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶನ ಮಾಡಿದರು.30 ಕ್ಕೂ ಅಧಿಕ ವಾಣಿಜ್ಯ ಮಳಿಗೆಗಳಲ್ಲಿ ವಿದ್ಯಾರ್ಥಿಗಳು ಸ್ವತಃ ವ್ಯಾಪಾರವನ್ನು ಮಾಡುವುದರ ಮುಖೇನ ತಮ್ಮ ಪ್ರತಿಭೆಯನ್ನು ಹೊರಸುಸಿದರು.
