ಹೇರೂರು:ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಜ್ವಲಂತ ಸಮಸ್ಯೆಗಳು ಅನಾವರಣ


ಕುಂದಾಪುರ:ಕರ್ನಾಟಕ ಸರಕಾರ,ಜಿಲ್ಲಾ ಪಂಚಾಯತ್ ಉಡುಪಿ,ತಾಲೂಕು ಪಂಚಾಯತ್ ಬೈಂದೂರು ಹಾಗೂ ಹೇರೂರು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ ಪ್ರಕೃತಿ ಮಡಿಲಲ್ಲಿ ಬುಧವಾರ ನಡೆಯಿತು.ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯಾಡಳಿತದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಅವರು ಮಕ್ಕಳ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿ,ಗ್ರಾಮ ಪಂಚಾಯತ್ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸುವದರ ಮೂಲಕ ಮಕ್ಕಳ ಸಮಸ್ಯೆಯನ್ನು ಆಲಿಸಿದ್ದಾರೆ.ಮತ್ತೊಮ್ಮೆ ಪೂರ್ವ ಸಿದ್ಧತೆಯೊಂದಿಗೆ ಪಂಚಾಯತ್ ಮಟ್ಟದಲ್ಲಿ ಸಭೆಯನ್ನು ನಡೆಸಿ ಮಕ್ಕಳ ಗ್ರಾಮ ಸಭೆಯಲ್ಲಿ ಮಂಡಿಸಿದ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿ ಪರಿಹಾರವನ್ನು ಕಂಡುಕೊಳ್ಳು ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಪ್ರಕೃತಿ ಮಡಿಲಲ್ಲಿ ಆಯೋಜನೆ ಮಾಡುವುದರ ಮೂಲಕ ಪ್ರಕೃತಿ ಮತ್ತು ಮಾನವರ ನಡುವಿನ ಸಂಬಂಧದ ಚಿತ್ರಣವನ್ನು ತೋರಿಸಿಕೊಟ್ಟಂತೆ ಇದೆ,ಮಕ್ಕಳಿಗೆ ಸ್ವತಂತ್ರ ನೀಡುವಂತಹ ಪರಿಸರದಲ್ಲಿ ಮಕ್ಕಳ ಗ್ರಾಮ ಸಭೆ ಆಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ.ಇದೊಂದು ಮಾದರಿ ಸಭೆಯಾಗಿದೆ ಎಂದು ಹೇಳಿದರು.

ಹೇರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ ಮಾತನಾಡಿ,ಸಣ್ಣ ರೀತಿಯ ಹಾಗೂ ಗಂಭೀರ ಸ್ವರೂಪದ ಸಮಸ್ಯೆಗಳು ವಿಶೇಷ ಗ್ರಾಮ ಸಭೆಯಲ್ಲಿ ಮಕ್ಕಳು ಮಂಡಿಸಿದ್ದಾರೆ.ಗಂಭೀರ ಸ್ವರೂಪದ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಮಾಡಿ ಹಂತ ಹಂತವಾಗಿ ಬಗೆಹರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಹೇರೂರು ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಮಕ್ಕಳ ಮಿತ್ರ ಗಣಪತಿ ಪೂಜಾರಿ, ಶಿಕ್ಷಣ ಸಂಯೋಜಕ ಯೋಗೀಶ್, ಸಿಡಿಪಿಒ ಬೇಬಿ, ಮಕ್ಕಳ ಹಕ್ಕುಗಳ ತಜ್ಞ ಬಿ.ಪೀರ್ ಮೊಹ್ಮದ್, ಕಿರಿ ಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಘವೇಂದ್ರ,ನಮ್ಮ ಭೂಮಿ ಕಲ್ಪನಾ ಹಾಗೂ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಪಂಚಾಯತ್ ಸಿಬ್ಬಂದಿಗಳು,ಆಶಾ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿಡಿಒ ಪ್ರಕಾಶ್ ಸ್ವಾಗತಿಸಿ, ವಂದಿಸಿದರು.ಪಂಚಾಯತ್ ಸದಸ್ಯ ಸುಲ್ಯಣ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಂಚಾಯತ್ ಸಿಬ್ಬಂದಿ ಚಂದ್ರ ಗಾಣಿಗ ಅನುಪಾಲನಾ ವರದಿ ಮಂಡಿಸಿದರು.ನಮ್ಮ ಭೂಮಿ ಶ್ರೀನಿವಾಸ ಗಾಣಿಗ ನಿರೂಪಿಸಿದರು.
ಸ.ಹಿ.ಪ್ರಾ ರಾಗಿಹಕ್ಲು ಶಾಲೆ,ಹೇರೂರು ಶಾಲೆ,ಉಳ್ಳೂರು-11 ಶಾಲೆ,ಮೇಕೋಡು ಶಾಲೆ,ನಾವುಂದ ಹೈಸ್ಕೂಲ್,ಸ.ಕಿ.ಪ್ರಾ ಕಿಸ್ಮತಿ ಶಾಲೆ,ಸ.ಕಿ.ಪ್ರಾ ಆಲಗದ್ದೆ ಕೇರಿ ಶಾಲೆ ಮಕ್ಕಳು,ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿದ್ದರು.

ಜ್ವಲಂತ ಸಮಸ್ಯೆಗಳನ್ನು ಚರ್ಚಿಸಿದ ಮಕ್ಕಳು,ಮೌನಕ್ಕೆ ಶರಣಾದ ಅಧಿಕಾರಿಗಳು.
ಹೇರೂರು ಶಾಲೆ ವಿದ್ಯಾರ್ಥಿ:-ಕೀರ್ತಿ ಶಾಲೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು ಪಕಾಸಿಗೆ ಗೆದ್ದಲು ಹಿಡಿದಿದೆ ನೂತನ ಕಟ್ಟಡ ನಿರ್ಮಿಸುವಂತೆ ಬೇಡಿಕೆಯನ್ನು ಇಟ್ಟರು.6ನೇ ತರಗತಿ ವಿದ್ಯಾರ್ಥಿ ಸಮರ್ಥ ಗಂಡು ಮಕ್ಕಳ ಶೌಚಾಲಯ ನಿರ್ಮಿಸುವಂತೆ ಮನವಿಯನ್ನು ಮಾಡಿದರು.ಯರುಕೋಣೆ ಭಾಗಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿಶೇಷ ಶೌಚಾಲಯ ನಿರ್ಮಾಣ ಮಾಡುವಂತೆ ಕೇಳಿಕೊಂಡರು.ಕಿಸ್ಮತಿ ಶಾಲೆ ವಿದ್ಯಾರ್ಥಿಗಳು:-ಕೆಂಜಿ ದೊಡ್ಮನೆ ಬಳಿ ಇರುವ ತೋಡಿಗೆ ಕಾಲು ಸಂಕ ನಿರ್ಮಿಸಬೇಕು,ಕಿಸ್ಮತಿ ಶಾಲೆ ಹೋಗುವ ದಾರಿ ಬಳಿ ಕಾಲು ಸಂಕಕ್ಕೆ ಕೈಹಿಡಿ ನಿರ್ಮಿಸಬೇಕು ಎನ್ನುವುದರ ಬಗ್ಗೆ ಬೇಡಿಕೆ ಇಟ್ಟರು.

ರಾಹಿಹಕ್ಲು ಶಾಲೆ ವಿದ್ಯಾರ್ಥಿಗಳು:-ಶಾಲಾ ಆವರಣದಲ್ಲಿ ಮದ್ಯದ ಬಾಟಲಿ ಬೀಳುತ್ತಿದೆ,ರಿಕ್ಷಾದ ವೆಚ್ಚ ಬರಿಸುವಿಕೆ,ಶಾಲೆ ಬಳಿ ಮದ್ಯ,ಗುಟಕ ಮಾರಾಟ ಮಾಡುವುದರ ಬಗ್ಗೆ ನಿಲ್ಲಿಸುವಂತೆ ಪಂಚಾಯಿತಿಗೆ ಮನವಿ ಮಾಡಿದರು.ಶಿಕ್ಷಕರ ನೇಮಕ,ಶಾಲೆ ಕಟ್ಟಡ ದುರಸ್ತಿ,ಬೀದಿ ದೀಪ ಅಳವಡಿಕೆ,ಬಾವಿ ನೀರು ಕಲುಷಿತಗೊಳ್ಳುತ್ತಿದೆ ಪರ್ಯಾಯವಾಗಿ ಬೋರ್‍ವೆಲ್ ನಿರ್ಮಿಸಬೇಕು ಎನ್ನುವುದರ ಬಗ್ಗೆ ಬೇಡಿಕೆ ಇಟ್ಟರು.
ಆಲಗದ್ದೆಕೇರಿ ಶಾಲೆ ವಿದ್ಯಾರ್ಥಿಗಳು:-ಶಾಲೆಗೆ ಪೀಠೊಪಕರಣ,ಸ್ಮಾರ್ಟ್ ಕ್ಲಾಸ್,ಸೈನ್ಸ್ ಲ್ಯಾಬ್,ನೀರಿನ ಸಮಸ್ಯೆ,ಗದ್ದೆಬೈಲು ಎಂಬಲ್ಲಿ ಕಾಲು ಸಂಕಕ್ಕೆ ಕೈಹಿಡಿ ಜೋಡಣೆ ಮಾಡುವುದರ ಬಗ್ಗೆ ಮನವಿಯನ್ನು ಮಾಡಿದರು.
ಉಳ್ಳೂರು ಶಾಲೆ ವಿದ್ಯಾರ್ತಿಗಳು:-ಗ್ರಂಥಾಲಯ ನಿರ್ಮಾಣಕ್ಕೆ ಬೇಡಿಕೆ,ಕಂಪ್ಯೂಟರ್ ಕ್ಲಾಸ್ ಆರಂಭಿಸುವಂತೆ ಮನವಿ ಮಾಡಿದರು.
ಸಿಂಗಲ್ ಪೇರೆಂಟ್,ಮಾಶಾಸನ ನೀಡುವುದರ ಬಗ್ಗೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳು ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಕ್ಕಳು ಮಂಡಿಸಿದರು.

ಮೇಕೋಡು ಶಾಲೆ ವಿದ್ಯಾರ್ಥಿಗಳು:-ಶಾಲಾ ಆವರಣದಲ್ಲಿ ಬಿದ್ದ ಮದ್ಯದ ಖಾಲಿ ಬಾಟಲಿಗಳು ಮತ್ತು ಗುಟಕ ಝರಿಯನ್ನು ಚೀಲದಲ್ಲಿ ತುಂಬಿಕೊಂಡು ಬಂದು ಮಕ್ಕಳ ಗ್ರಾಮ ಸಭೆ ವೇದಿಕೆಯಲ್ಲಿ ಸುರಿಯುವುದರ ಮೂಲಕ ಶಾಲಾ ಆವರಣದಲ್ಲಿ ಆಗುತ್ತಿರುವ ಅಕ್ರಮ ಚಟುವಟಿಕೆ ಕುರಿತು ಗ್ರಾಮ ಪಂಚಾಯತ್ ಗಮನಕ್ಕೆ ತಂದರು.ಶಾಲೆ ದುರಸ್ತಿ,ಕಪೌಂಡ್ ನಿರ್ಮಾಣ,ಬೆಂಚ್ ಡೆಸ್ಕ್,ಶಾಲೆಗೆ ಸುಣ್ಣಬಣ್ಣ ಬಳಿಯುವ ಬಗ್ಗೆ ಬೇಡಿಕೆಯನ್ನು ಇಟ್ಟರು.
ಉಪ್ರಳ್ಳಿ ಶಾಲೆ ವಿದ್ಯಾರ್ಥಿಗಳು:-ರಸ್ತೆ ಸಂಪರ್ಕ ವ್ಯವಸ್ಥೆ ಬೀದಿ ದೀಪ ಅಳವಡಿಕೆ ಹಾಗೂ ಉಪ್ರಳ್ಳಿ ಮತ್ತು ಅಂಗನವಾಡಿ ಶಾಲೆಗೆ ಕಪೌಂಡ್,ಕಾಲು ಸಂಕ ನಿರ್ಮಾಣ,ಆಟದ ಮೈದಾನದ ವ್ಯವಸ್ಥೆ,ಶಾಲೆ ಮಾಡು ರಿಪೇರಿ ಮಾಡುವಂತೆ ಬೇಡಿಕೆಯನ್ನು ಮುಂದಿಟ್ಟರು.
ನಾವುಂದ ಹೈಸ್ಕೂಲು ವಿದ್ಯಾರ್ಥಿಗಳು:-ಬಸ್ ಸಮಸ್ಯೆ,ಬೀದಿ ನಾಯಿ ಹಾವಳಿ,ಹೇರೂರು ದೇವಸ್ಥಾನದ ಬಳಿ ಬೀದಿ ದೀಪ ಸಮಸ್ಯೆಯನ್ನು ಬಿಚ್ಚಿಟ್ಟರು.
ವರದಿ:-ಜಗದೀಶ ದೇವಾಡಿಗ