ಸತ್ಯದ ಮೇಲೆ ಬೆಳಕನ್ನು ಚೆಲ್ಲುವ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ-ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಉಡುಪಿ:ಶ್ರಮ,ಧ್ಯೇಯ,ಹಠವಿದ್ದರೆ ಮಾತ್ರ ಬದುಕಿನಲ್ಲಿ ಗೆಲುವನ್ನು ಸಾಧಿಸಬಹುದು.ಸಮಾಜದ ಅಂಕುಡೊಂಕು ತಿದ್ದುವ,ಸತ್ಯದ ಮೇಲೆ ಬೆಳಕನ್ನು ಚೆಲ್ಲುವ ಗುರುತರ ಜವಾಬ್ದಾರಿ ಮಾಧ್ಯಮ,ಪತ್ರಕರ್ತರ ಮೇಲಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ರಜತ ಮಹೋತ್ಸವ ಸಮಿತಿ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಸಹಯೋಗದಲ್ಲಿ ಮಣಿಪಾಲ ಕೆಎಂಸಿ ಡಾ.ಟಿಎಂಪೈ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರಿಗೆ ನಿವೇಶನ ಸಹಿತ ಸರಕಾರದಿಂದ ವಿವಿಧ ಸೌಲಭ್ಯಗಳನ್ನು ಒದಗಿಸಲು ಯತ್ನಿಸುವೆ,ಉಡುಪಿ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರದ ಮಾರ್ಗದ ಮೂಲಕ ಅಭಿವೃದ್ಧಿಗೊಳಿಸುವ ಕಡೆಗೆ ಗಮನ ಹರಿಸುತ್ತೇನೆ ಎಂದು ಹೇಳಿದರು.
ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಮಾತನಾಡಿ ಪತ್ರಕರ್ತರು ರಾಜಕಾರಣಿಗಳು ಪರಸ್ಪರ ಬಿಟ್ಟು ಬದುಕಲಾಗದು.ಸುದ್ದಿ ಜತೆಗೆ ಸಕಾರತ್ಮಕ ಚಿಂತನೆ,ಏಕತೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್,ಜಿಲ್ಲಾಧಿಕಾರಿ ಕೂರ್ಮರಾವ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ,ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ,ಉಡುಪಿ ಶಾಸಕ ಯಶಪಾಲ್ ಸುವರ್ಣ,ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
(ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅಭಿನಂದಿಸಲಾಯಿತು)
