ಮರವಂತೆಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ,ಮಕ್ಕಳ ಹಬ್ಬ ಕಾರ್ಯಕ್ರಮ



ಕುಂದಾಪುರ:ಮಕ್ಕಳು ತಮ್ಮ ಪೋಷಕರೊಡನೆರೊಡನೆ ಹಂಚಿಕೊಳ್ಳಲು ಸಾಧ್ಯವಾಗದ ಸಮಸ್ಯೆಗಳನ್ನು ಮಕ್ಕಳ ಗ್ರಾಮ ಸಭೆಯಲ್ಲಿ ಹಂಚಿಕೊಂಡಿದ್ದಾರೆ.ಸಾಮಾಜಿಕ ಕಳಕಳಿಯಿಂದ ಮಕ್ಕಳು ವ್ಯಕ್ತಪಡಿಸಿದ ಸಮಸ್ಯೆಗಳನ್ನು,ಅವರ ಬೇಡಿಕೆಗಳನ್ನು ನೂರಕ್ಕೆ ನೂರಷ್ಟು ಈಡೇರಿಕೆ ಮಾಡಲು ಪ್ರಯತ್ನಿಸಲಾಗುವುದು. ಮಗುವಿನ ಗ್ರಹಿಕೆಯನ್ನು ಅವರೊಳಗೆ ಅಡಗಿರುವ ಸಮಸ್ಯೆಗಳನ್ನು ಅಧ್ಯಾಯನ ಮಾಡಲು ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರಯೋಜನಕಾರಿ ಆಗುತ್ತದೆ ಎಂದು ಬೈಂದೂರು ಕಾರ್ಯನಿರ್ವಹಣಾಧಿಕಾರಿ ಭಾರತಿ ಹೇಳಿದರು.



ಕರ್ನಾಟಕ ಸರಕಾರ,ಜಿಲ್ಲಾ ಪಂಚಾಯತ್ ಉಡುಪಿ,ತಾಲೂಕು ಪಂಚಾಯತ್ ಬೈಂದೂರು,ಗ್ರಾಮ ಪಂಚಾಯತ್ ಮರವಂತೆ ಅವರ ಸಂಯುಕ್ತ ಆಶ್ರಯದಲ್ಲಿ ಮರವಂತೆ ಕಡಲ ತೀರದಲ್ಲಿ ಮಂಗಳವಾರ ನಡೆದ ಮಕ್ಕಳ ವಿಶೇಷ ಗ್ರಾಮಸಭೆ,ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸ್ಥಳೀಯಾಡಳಿತ ಕೇಂದ್ರ ಡಾ.ಸೈಯದ್ ನೂರ್ ಫಾತೀಮಾ ಮಾತನಾಡಿ,ಮೂಲಭೂತ ಸಮಸ್ಯೆಗಳನ್ನು ವೇದಿಕೆಯಲ್ಲಿ ಪ್ರಸ್ತಾಪಿಸುವುದರ ಮೂಲಕ ಸ್ಥಳಿಯಾಡಳಿತದ ಗಮನವನ್ನು ಸೆಳೆದಿರುವುದು ಉತ್ತಮವಾದ ಬೆಳವಣಿಗೆ ಎಂದು ಹೇಳಿದರು.ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಎಸ್.ಜನಾರ್ದನ ಮರವಂತೆ ಮಾತನಾಡಿ,ಮಕ್ಕಳು ಧೈರ್ಯವಾಗಿ ವೇದಿಕೆಯಲ್ಲಿ ಮಾತನಾಡುವ ಮೂಲಕ ಮಕ್ಕಳ ಗ್ರಾಮ ಸಭೆ ಸಾರ್ಥಕತೆಯನ್ನು ಕಂಡಿದೆ ಎಂದು ಅಭಿಪ್ರಾಯಪಟ್ಟರು.


ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷೆ ಸುಶೀಲ ಪೂಜಾರಿ,ಮಕ್ಕಳ ಹಕ್ಕುಗಳ ತಜ್ಞ ಕಿಶನ್ ರಾಮಮೂರ್ತಿ,ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಣೇಶ್ ಭಟ್,ಗಂಗೊಳ್ಳಿ ಠಾಣೆ ಗುಪ್ತಚರ ಪಿಎಸ್‍ಐ ಬಸವರಾಜ್ ಕನಶೆಟ್ಟಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೇಬಿ,ಪಂಚಾಯತ್ ಮಟ್ಟದ ಸಂಯೋಜಕಿ ಆಶಾ,ಮರವಂತೆ ಪಂಚಾಯಿತಿ ಸದಸ್ಯರಾದ ನಾಗರಾಜ ಪಟಗಾರ್,ಸುಧಾಕರ ಆಚಾರ್ಯ,ವನಜ ಪೂಜಾರಿ,ಸುಜಾತ,ದಿನೇಶ ದೇವಾಡಿಗ,ಜ್ಯೋತಿ ಶೆಟ್ಟಿ,ವಿನಾಯಕ ರಾವ್,ಸುಶೀಲ ಖಾರ್ವಿ,ರುಕ್ಮಿಣಿ,ವಸಂತಿ ಪೂಜಾರಿ ಮತ್ತು ಸಿಬ್ಬಂದಿಗಳು,ಶಾಲಾ ಶಿಕ್ಷಕರು,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು,ಗ್ರಾಮಸ್ಥರು ಉಪಸ್ಥಿತರಿದ್ದರು.ಪಿಡಿಒ ಶೋಭಾ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಸೇರಿಗಾರ್ ಅನುಪಾಲನಾ ವರದಿ ಮಂಡಿಸಿದರು.ಸದಸ್ಯ ಕರುಣಾಕರ ಆಚಾರ್ಯ ನಿರೂಪಿಸಿದರು.ಸಿಬ್ಬಂದಿ ಗುರುರಾಜ ವಂದಿಸಿದರು.ಮರವಂತೆ ಕಡಲ ತೀರದಲ್ಲಿ ಮಕ್ಕಳಿಂದ ಗಾಳಿಪಟ ಸ್ಪರ್ಧೆ ನಡೆಯಿತು,ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು,ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಮಕ್ಕಳ ಸಮಸ್ಯೆಗಳಿಗೆ ಧ್ವನಿಯಾದ ಮಕ್ಕಳ ವಿಶೇಷ ಗ್ರಾಮ ಸಭೆ:ವಿಕಲ ಚೇತನರ ಅನಿಸಿಕೆ ಹಂಚಿಕೆಅಡಿಯಲ್ಲಿ ಮಾತನಾಡಿದ ವಿಶೇಷ ಚೇತನ ಸಿಂಚನ ತನ್ನ ಮೇಡಿಷಿನ್ ಮತ್ತು ಆಸ್ಪತ್ರೆ ಖರ್ಚು ವೆಚ್ಚವನ್ನು ಭರಿಸಲು ಸಹಾಯಧನ ನೀಡಬೇಕೆಂದು ಕೇಳಿಕೊಂಡರು.ವಿದ್ಯಾರ್ಥಿ ಮನೀಶ್ ಮರವಂತೆಯಲ್ಲಿ ಫಿಸಿಯೋಥೆರಪಿ ಕೇಂದ್ರ ಸ್ಥಾಪನೆಗೆ ಮನವಿ ಮಾಡಿದರು.ಅಂಗವಿಕಲ ಸಮಸ್ಯೆಯಿಂದ ಬಳಲುತ್ತಿದ್ದ 7ನೇತರಗತಿ ವಿದ್ಯಾರ್ಥಿನಿ ಮಾನ್ಯ ತಾಂತ್ರಿಕ ಸಮಸ್ಯೆಯಿಂದ ಪಿಂಚಣಿ ದೊರೆಯುತ್ತಿಲ್ಲ ಎಂದು ದೂರಿದರು.ಮಾನಸ ಮರವಂತೆ ಪ್ರೌಢಶಾಲೆಯಲ್ಲಿ ಬಿಸಿ ನೀರಿನ ಘಟಕ ಸ್ಥಾಪನೆ ಮಾಡುವಂತೆ ಬೇಡಿಕೆ ಸಲ್ಲಿಸಿದರು.8ನೇ ತರಗತಿ ವಿದ್ಯಾರ್ಥಿನಿ ಚರಿತ್ರ ಶಾಲೆಗೆ ನಾಲ್ಕು ಕಿ.ಮೀ ದೂರ ನಡೆದುಕೊಂಡ ಬರಲು ಸಾಧ್ಯವಾಗುತ್ತಿಲ್ಲ ಸೈಕಲ್ ನೀಡುವಂತೆ ಕೇಳಿಕೊಂಡರು.8ನೇ ತರಗತಿ ವಿದ್ಯಾರ್ಥಿನಿ ಸಮನ್ವಿ ಹೆಣ್ಣು ಮಕ್ಕಳಿಗೆ ಸುಸಜ್ಜಿತ ಶೌಚಾಲಯ ನಿರ್ಮಿಸುವಂತೆ ಬೇಡಿಕೆ ಸಲ್ಲಿಕೆ ಮಾಡಿದರು.ಅಕ್ಷಯ ಎರಡು ವರ್ಷಗಳಿಂದ ಸ್ಕಾಲರ್ ಶಿಪ್ ದೊರೆತ್ತಿಲ್ಲ ಸ್ಕಾಲರ್ ಶಿಪ್ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಅನಿಶ್ ಸಿಂಗಲ್ ಪೆರೆಂಟ್ ವಿದ್ಯಾರ್ಥಿಗಳಿಗೆ ಮಾಶಾನ ನೀಡಬೇಕು ಎಂದು ಧ್ವನಿ ಎತ್ತಿದರು.ಕಿವುಡುತನದ ಸಮಸ್ಯೆಯನ್ನು ಎದುರಿಸುತ್ತಿರುವ 4ನೇ ತರಗತಿ ವಿದ್ಯಾರ್ಥಿನಿ ಅಶ್ವಿತಾ ಉತ್ತಮ ಗುಣಮಟ್ಟದ ಕಿವಿಗೆ ಹಾಕಿಕೊಳ್ಳುವ ಯಂತ್ರ ನೀಡುವಂತೆ ಬೇಡಿಕೆ ಇಟ್ಟರು.ಬೀದಿನಾಯಿ ಹಾವಳಿ,ಆಟದ ಮೈದಾನ ದುರಸ್ತಿ ಸೇರಿದಂತೆ ಹಲವಾರು ಮೂಲಭೂತ ಸಮಸ್ಯೆಗಳನ್ನು ಮಕ್ಕಳು ಪ್ರಾಸ್ತಾಪ ಮಾಡಿದರು.ಪಂಚಾಯತ್ ಅಧ್ಯಕ್ಷ ಲೋಕೇಶ್ ಖಾರ್ವಿ ಮಾತನಾಡಿ ಪಂಚಾಯತ್ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಲಾಗುವುದು,ವಿಶೇಷ ಪ್ರಕರಣಗಳ ಬಗ್ಗೆ ಸರಕಾರಕ್ಕೆ ವರದಿ ನೀಡುವುದಾಗಿ ಹೇಳಿದರು. ಮಕ್ಕಳ ವಿಶೇಷ ಗ್ರಾಮಸಭೆ ಮಕ್ಕಳ ಸಮಸ್ಯೆಗಳಿಗೆ ಧ್ವನಿ ಆಯಿತು.
ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ





















































































































































































































































































































































































































































































































































































































































































































































































































































































































































































































































































































































































































































































































































































































































































