ಹೇರಂಜಾಲುನಲ್ಲಿ ಶೆಫ್‍ಟಾಕ್ ನ್ಯೂಟ್ರಿಪುಡ್ಸ್ ಪ್ರೈವೇಟ್ ಲಿಮಿಟೆಡ್ ಚಿಕ್ಕಿ,ಚಕ್ಕುಲಿ ಘಟಕ ಉದ್ಘಾಟನೆ


ಕುಂದಾಪುರ:ಬೈಂದೂರು ತಾಲೂಕಿನ ಹೇರಂಜಾಲುನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮಾಜ ಸೇವಕ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ ಅವರ ಮಾಲೀಕತ್ವದ ಶೆಫ್‍ಟಾಕ್ ನ್ಯೂಟ್ರಿಪುಡ್ಸ್ ಪ್ರೈವೇಟ್ ಲಿಮಿಟೆಡ್ ಚಿಕ್ಕಿ,ಚಕ್ಕುಲಿ ಮತ್ತು ಇತರ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನಾ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ನಡೆಯಿತು.

ಗೌರಿಗದ್ದೆ ಆಶ್ರಮ ಅವಧೂತ ಶ್ರೀ ವಿನಯ್ ಗುರೂಜಿ ಅವರು ಚಿಕ್ಕಿ ಉತ್ಪನವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿ,ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಬ್ರಹ್ಮಶ್ರೀ ನಾರಾಯಣ ಗುರು ಅವರು ತೆಂಗಿನ ನಾರಿನಿಂದ ಹಗ್ಗವನ್ನು ಕಟ್ಟಿ ಕೊಡುವ ಕಾಯಕಕ್ಕೆ ಮುನ್ನುಡಿಯನ್ನು ಬರೆದಿದ್ದರು.ಆ ನಿಟ್ಟಿನಲ್ಲಿ ಡಾ.ಗೋವಿಂದ ಬಾಬು ಪೂಜಾರಿ ಅವರು ನವ ಉದ್ಯಮಗಳನ್ನು ಸ್ಥಾಪಿಸಿ ಸಾವಿರಾರು ಯುವಕರಿಗೆ ಕೆಲಸವನ್ನು ನೀಡುವಂತಹ ಕಾಯಕವನ್ನು ಮಾಡುತ್ತಿದ್ದಾರೆ.ಅವರ ಉದಾತ ಮನೋಭಾವದಿಂದ ಬಹಳಷ್ಟು ಮನೆಗಳು ಬೆಳಕನ್ನು ಕಾಣುವಂತೆ ಆಗಿದೆ ಎಂದು ಹೇಳಿದರು.
ಅಹಂಕಾರವಿಲ್ಲದೆ ಸೇವೆ ಮಾಡುವ ಮನೋಭಾವವನ್ನು ಹೊಂದಿರುವುದು ಗೋವಿಂದ ಬಾಬು ಪೂಜಾರಿ ಅವರ ಗುಣಗಳಾಗಿದ್ದು.ಉದ್ಯಮ ಸ್ಥಾಪನೆ ಜತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.ಶೂನ್ಯದಿಂದ ಬದುಕನ್ನು ಕಟ್ಟಿಕೊಂಡು ಸಮಾಜದ ಒಳಿತಿಗಾಗಿ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.ಗ್ರಾಮೀಣ ಪ್ರದೇಶದಲ್ಲಿ ಚಿಕ್ಕಿ ಘಟಕವನ್ನು ಸ್ಥಾಪನೆ ಮಾಡಿರುವುದರಿಂದ ಸುತ್ತಮುತ್ತಲಿನ ಪರಿಸರದ ಜನರಿಗೆ ಉದ್ಯೋಗ ದೊರಕುವಂತೆ ಆಗಿದೆ.ಎಲ್ಲರೂ ಅವರಿಗೆ ಸಹಕಾರ ನೀಡಬೇಕೆಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಅವರು ಚಿಕ್ಕಿ ಘಟಕವನ್ನು ಉದ್ಘಾಟಿಸಿ ಮಾತನಾಡಿ,ಕಷ್ಟದ ನಡುವೆಯೂ ಛಲದಿಂದ ಸ್ವಂತ ಉದ್ಯಮವನ್ನು ಸ್ಥಾಪನೆ ಮಾಡಿ ಸಾವಿರಾರರು ಜನರಿಗೆ ಉದ್ಯೋಗವನ್ನು ನೀಡಿದ್ದಾರೆ,ಹುಟ್ಟೂರಿನ ಜನರಿಗೆ ಉಪಕಾರ ಮಾಡುವಂತಹ ಗುಣವನ್ನು ಹೊಂದಿರುವ ಗೋವಿಂದ ಬಾಬು ಪೂಜಾರಿ ಅವರು ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಅಶಕ್ತರ ಸೇವೆ ಮಾಡುತ್ತಿದ್ದಾರೆ.ಪುಟ್ಟ ಹಳ್ಳಿಯಿಂದ ದೇಶದ ವಿವಿಧ ಭಾಗಗಳಿಗೆ ತೆರಳಿ ಉದ್ಯೋಗವನ್ನು ಸೃಷ್ಟಿಸಿರುವುದು ಒಳ್ಳೆ ಕಾರ್ಯವಾಗಿದೆ ಎಂದು ಹೇಳಿದರು.ಬಿಜೂರು ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಮತ್ತು ಸಂಬಂಧಿಸಿದ ಇಲಾಖೆ ಸೂಚನೆ ನೀಡುತ್ತೇನೆ ಎಂದು ಉತ್ತರಿಸಿದರು.
ಮನುಷ್ಯ ಕಷ್ಟಪಟ್ಟು ಮುಂದೆ ಬಂದಿದ್ದರೆ ಮಾತ್ರ ಆತನಿಗೆ ಕಷ್ಟಪಟ್ಟವರ ಬೆಲೆ ಗೊತ್ತಿರುತ್ತಿದೆ.ಸಾಮಾಜಿಕ ಮನೋಭಾವವನ್ನು ಹೊಂದದಿರುವ ವ್ಯಕ್ತಿಯನ್ನು ಬೆಂಬಲಿಸಬೇಕು ಎಂದು ಅವರು ಹೇಳಿದರು.ಫ್ಯಾಕ್ಟರಿ ಉದ್ಘಾಟಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ.ಉದ್ಯಮ ಕಟ್ಟೋದು ಅಷ್ಟು ಸುಲಭವಲ್ಲ,ಇದಕ್ಕೆ ಅಡ್ಡಿಪಡಿಸೋರೆ ಜಾಸ್ತಿ.ಗೋವಿಂದ ಪೂಜಾರಿ ಅವರ ಸಾಧನೆ ನಿಜಕ್ಕೂ ಮೆಚ್ಚುವಂತದ್ದು ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ,6.50 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ 1% ಜನರಿಗೆ ಮಾತ್ರ ಸರಕಾರಿ ಉದ್ಯೋಗವನ್ನು ನೀಡಲು ಸಾಧ್ಯವಿದೆ.ಉಳಿದ 99% ಜನರು ಸ್ವಂತ ಉದ್ಯೋಗ ಸಹಿತ ಇತರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅನಿವಾರ್ಯವಾಗಿದೆ.ಸ್ವಂತ ಉದ್ಯೋಗವನ್ನು ಮಾಡಲು ಸಾಧ್ಯವಾಗದೆ ಇದ್ದವರಿಗೆ ಇಂತಹ ಕೈಗಾರಿಕೆಗಳು ಬಹಳಷ್ಟು ಪ್ರಯೋಜನಾಕಾರಿಯಾಗಿದೆ.ಉದ್ಯೋಗದಾತರಾದ ಗೋವಿಂದ ಬಾಬು ಪೂಜಾರಿ ಅವರನ್ನು ಎಲ್ಲರೂ ಬೆಂಬಲಿಸಬೇಕೆಂದು ಹೇಳಿದರು.ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಶುಭಹಾರೈಸಿದರು.

ಶೆಫ್‍ಟಾಕ್ ನ್ಯೂಟ್ರಿಪುಡ್ಸ್ ಪ್ರೈವೇಟ್ ಲಿಮಿಟೆಡ್ ಚೇರ್ ಮ್ಯಾನ್ ಡಾ.ಗೋವಿಂದ ಬಾಬು ಪೂಜಾರಿ ಅವರು ಸ್ವಾಗತಿಸಿ ಮಾತನಾಡಿ,ಗೋಳಿಹೊಳೆಯಲ್ಲಿ ಉದ್ಯಮ ಆರಂಭಿಸಬೇಕೆಂದು ಶಿಲನ್ಯಾಸ ನೆರವೇರಸಿದರು.ಯಾವುದೋ ಒಂದು ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ,ಇಂದು ಕಂಬದಕೋಣೆಯಲ್ಲಿ ಘಟಕವನ್ನು ಆರಂಭಿಸಲು ಎಲ್ಲಾ ರೀತಿಯ ಸಹಕಾರ ಸಿಕ್ಕಿದ್ದರಿಂದ ಸಾಧ್ಯವಾಗಿದೆ.ಹುಟ್ಟೂರಿನಲ್ಲಿ ಉದ್ಯೋಗವನ್ನು ಸೃಷ್ಟಿಸುವ ಉದ್ದೇಶದಿಂದ ಚಿಕ್ಕಿ ಮತ್ತು ಘಟಕವನ್ನು ಸ್ಥಾಪನೆ ಮಾಡಲಾಗಿದ್ದು.200 ರಿಂದ 300 ಜನರಿಗೆ ಉದ್ಯೋಗವನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಸ್ವಾಲಂಬಿ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಆಯ್ದ ಮಹಿಳೆಯರಿಗೆ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹೋಲಿಗೆ ಯಂತ್ರವನ್ನು ವಿತರಿಸಲಾಯಿತು.ಅನಾರೋಗ್ಯಪೀಡಿತರಿಗೆ ಧನಸಹಾಯವನ್ನು ವಿತರಿಸಲಾಯಿತು.
ಕಂಬದಕೋಣೆ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ದೇವಾಡಿಗ,ಮಾಜಿ ಜಿ.ಪಂ ಉಪಾಧ್ಯಕ್ಷ ಎಸ್.ರಾಜು ಪೂಜಾರಿ,ಮಾಜಿ ತಾ.ಪಂ ಸದಸ್ಯ ವಿಜಯ ಶೆಟ್ಟಿ,ಜಿ.ಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ,ಮಾಲತಿ ಗೋವಿಂದ ಪೂಜಾರಿ,ಬೇಕರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ್ ಕುಲಾಲ್,ಕುಂದಾಪುರ ಸಹಾಯಕ ಸಹಾಯಕ ಕಮಿಷನರ್ ರಶ್ಮೀ ಆರ್,ಬೈಂದೂರು ತಹಶೀಲ್ದಾರ್ ಪ್ರದೀಪ ಉಪಸ್ಥಿತರಿದ್ದರು.



















































































































































































































































































































































































































































































































































































































































































































































































































































































































































































































































































































































































































































































































































































































































































