ಅನುಮಾನಾಸ್ಪದ ಸಾವು ಶಂಕೆ,ಹೂತ ಮೃತದೇಹ ಮೇಲಕ್ಕೆತ್ತಿ ಮರುತನಿಖೆ

ಮಂಗಳೂರು:ತಮ್ಮನ ಸಾವಿನ ಬಗ್ಗೆ ಅಣ್ಣ ಅನುಮಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮರು ತನಿಖೆಗಾಗಿ ನ್ಯಾಯಾಲಯಲದ ಆದೇಶದಂತೆ ಮಂಜೇಶ್ವರ-ವಿಟ್ಲ ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಕನ್ಯಾನ ಮಸೀದಿಯ ದಫನ ಭೂಮಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದ ಘಟನೆ ನಡೆದಿದೆ.
ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ನಿವಾಸಿ ಅಶ್ರಫ್(44)ಎಂಬವರು ಮಂಜೇಶ್ವರ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಪತ್ನಿಯ ಜೊತೆ ವಾಸವಾಗಿದ್ದು ಗೂಡಂಗಡಿ ವ್ಯವಹಾರ ನಡೆಸಿಕೊಂಡಿದ್ದರು.
ಮೇ 5ರಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದ ಅಶ್ರಫ್ ಅವರು ಮರುದಿನ ಅಂದರೆ ಮೇ 6ರಂದು ಮೃತಪಟ್ಟಿದ್ದರು.ಆದರೆ ತರಾತುರಿಯಲ್ಲಿ ಪತ್ನಿ ಕಡೆಯವರು ಅಶ್ರಫ್ ಮೃತದೇಹವನ್ನು ಕನ್ಯಾನದ ಬಂಡಿಯ ರಹ್ಮಾನಿಯಾ ಜುಮ್ಮಾ ಮಸೀದಿ ಆವರಣದ ದಫನ ಭೂಮಿಗೆ ತಂದು ಅಂತ್ಯಕ್ರಿಯೆ ನಡೆಸಿದ್ದರು. ಮೃತರ ಅಣ್ಣ ಮಹಾರಾಷ್ಟ್ರದ ಪೂನಾದಲ್ಲಿದ್ದ ಇಬ್ರಾಹಿಂ ಅವರು ತಮ್ಮನ ಸಾವು ಸಹಜ ಸಾವಲ್ಲ ಎಂದು ಬಲವಾದ ಅನುಮಾನ ವ್ಯಕ್ತಪಡಿಸಿ ಮಂಜೇಶ್ವರ ಪೊಲೀಸರಿಗೆ ಮೂರು ತನಿಖೆ ಮಾಡುವಂತೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಡೆದ ಮಂಜೇಶ್ವರ ಪೊಲೀಸರು ಮಂಗಳೂರು ಯೇನಪೋಯ ಆಸ್ಪತ್ರೆಯ ಫಾರೆನ್ಸಿಕ್ ತಜ್ಞರು, ಬಂಟ್ವಾಳ ತಹಶೀಲ್ದಾರ್ ಮತ್ತು ವಿಟ್ಲ ಪೊಲೀಸರ ಸಹಕಾರದಲ್ಲಿ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದಿಂದ ಅಶ್ರಫ್ ಅವರ ಮೃತದೇಹವನ್ನು ಮೇಲಕ್ಕೆತ್ತಿ ದ್ದಾರೆ. ಸುದ್ಧಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಅಶ್ರಫ್ ಸಾವಿನ ಸತ್ಯಾಂಶ ತನಿಖೆಯಲ್ಲಿ ಬಯಲಾಗಬೇಕಿದೆ.



















































































































































































































































































































































































































































































































































































































































































































































































































































































































































































































































































































































































































































































































































































































































































