ಅಷ್ಟಪವಿತ್ರ ನಾಗಮಂಡಲೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ಕನ್ಯಾನ ಗ್ರಾಮದ ಕೂಡ್ಲು ಬಾಡಬೆಟ್ಟು ಶ್ರೀಶನೀಶ್ವರ ಮತ್ತು ಶ್ರೀಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ನಾನಾ ಧಾಮಿರ್ಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಭಾನುವಾರ ನಡೆಯಿತು.
ಶ್ರೀನಾಗದೇವರ ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಫಲ ಸರ್ಮಣೆ,ಗುರುಗಣಪತಿ ಪೂಜೆ,ಕಲಶಾಭೀಷೆಕ,
ಮಹಾಪೂಜೆ,ನಾಗ ದರ್ಶನ,ತೀರ್ಥಪ್ರಸಾದ ವಿತರಣೆ,
ಮಹಾಅನ್ನಸಂತರ್ಪಣೆ,
ಹಾಲಿಟ್ಟು ಸೇವೆ,ದೇವರ ದರ್ಶನ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ವಿಧಿವಿಧಾನದೊಂದಿಗೆ ಸಂಪ್ರದಾಯ ಬದ್ಧವಾಗಿ ಜರುಗಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀನಾಗ ದೇವರ ಮಹಾ ಅನ್ನಪ್ರಸಾದವನ್ನು ಸ್ವೀಕರಿಸಿದರು.
ಶ್ರೀಕ್ಷೇತ್ರದ ಪ್ರಧಾನ ದೇವರಾದ ಶ್ರೀಶನೀಶ್ವರ ಮತ್ತು ಶ್ರೀಚೌಡೇಶ್ವರಿ,ಆಂಜನೇಯ ಸ್ವಾಮಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಅನ್ನಪೂರ್ಣ ಛತ್ರ ಶ್ರೀ ಕ್ಷೇತ್ರ ಮುಖ್ಯ ಪ್ರಬಂಧಕರು ಸುಬ್ರಹ್ಮಣ್ಯ ಪ್ರಸಾದ್ ಅವರು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಕರಾವಳಿ ಭಾಗದಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗೆ ಬಹಳಷ್ಟು ಪ್ರಾಮುಖ್ಯತೆ ಇದೆ.ಪ್ರಾಕೃತಿಕ ಸೊಬಗಿನಲ್ಲಿ ಕಂಗೊಳಿಸುತ್ತಿರುವ ನಾಗ ಬನವನ್ನು ಪ್ರಕೃತಿದತ್ತವಾಗಿ ಉಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ,ಧಾರ್ಮಿಕ ಕಾರ್ಯಗಳ ಮೂಲಕ ದೇವಸ್ಥಾನದ ಟ್ರಸ್ಟ್ ಉತ್ತಮವಾದ ಕೆಲಸವನ್ನು ಮಾಡುತ್ತಿರುವ ಸಂಗತಿ ಎಲ್ಲರಿಗೂ ಮಾದರಿ ಆಗಿದೆ ಎಂದು ಹೇಳಿದರು.
ಶ್ರೀ ಬಾರ್ಕೂರು ಮಹಾಸಂಸ್ಥಾನ ಶ್ರೀ ವಿದ್ಯಾವಾಚಸ್ಪತಿ ಡಾ.ವಿಶ್ವ ಸಂತೋಷ ಭಾರತೀ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ,ಬಹಳಷ್ಟು ಪರಂಪರೆಯನ್ನು ಹೊಂದಿರುವ ಸನಾತನದ ಧರ್ಮದ ಉಳಿವಿಗಾಗಿ,ಧರ್ಮ ಜಾಗೃತಿಗಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.ಮಕ್ಕಳನ್ನು ಸುಸಂಸ್ಕೃತರಾಗಿ ಬೆಳೆಸಬೇಕು,ಮಾತೃ ಶಿಕ್ಷಣವೇ ಪ್ರಧಾನವಾಗಿದೆ ಎಂದರು.ಧರ್ಮದ ನೆಲೆಯಲ್ಲಿ ಬಾಳುವುದು ರಿಂದ ನಿಷ್ಠಾವಂತರಾಗಿ ಬದುಕಬಹುದು ಎಂದು ಹೇಳಿದರು.
ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ದೇವಸ್ಥಾನದ ಆಡಳಿತ ಧರ್ಮದರ್ಶಿ ಜಯರಾಮ ಸ್ವಾಮಿ ಮಾತನಾಡಿ,ಶ್ರೀ ಕ್ಷೇತ್ರದಲ್ಲಿ ಮೊದಲ ಬಾರಿಗೆ ನಡೆದ ಅಷ್ಟಪವಿತ್ರ ನಾಗಮಂಡಲೋತ್ಸವ ಯಶಸ್ವಿಯಾಗಿ ನಡೆದಿದೆ.ಇವೊಂದು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಧಾರ್ಮಿಕ ಮುಖಂಡರಾದ ಅಪ್ಪಣ್ಣ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ಬಹಳಷ್ಟು ವ್ಯವಸ್ಥಿತವಾದ ರೀತಿಯಲ್ಲಿ ನಡೆದಿರುವುದು ದೈವ ಸಂಕಲ್ಪ ವಾಗಿದೆ.ಭಗವಂತನ ಮೇಲೆ ಜನರಿಗೆ ಇರುವ ದೃಢವಾದ ನಂಬಿಕೆ ಯಿಂದಲೆ ಇಂದು ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿದ್ದೆ ಎಂದು ಹೇಳಿದರು.ಶ್ರೀ ಕ್ಷೇತ್ರದ ಪ್ರಭಾವದಿಂದ ಎಲ್ಲರಿಗೂ ಒಳಿತಾಗಲಿ ಎಂದು ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ಪ್ರಧಾನ ಪುರೋಹಿತರಾದ ಗುರುರಾಜ್ ಸೋಮಯಾಜಿ,ಕುಂದಾಪುರ ವಕೀಲರಾದ ಟಿ.ಬಾಲಕೃಷ್ಣ ಶೆಟ್ಟಿ,ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬು ಸ್ವಾಮಿ ಮೂಲ ಕ್ಷೇತ್ರ ಕಚ್ಚೂರು ಬಾರ್ಕೂರು ಧರ್ಮದರ್ಶಿ ಗಳಾದ ಗೋಕುಲ್ ದಾಸ್ ಬಾರ್ಕೂರು, ಜ್ಯೋತಿಷ್ಯರಾದ ಹರವರಿ ಚಿತ್ತೂರು ದಿನಕರ ಉಡುಪ, ಕುಂದಾಪುರ ವಕೀಲರಾದ ಶರತ್ ಕುಮಾರ್ ಶೆಟ್ಟಿ,ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಬಸ್ರೂರು, ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ಯೋಜನಾಧಿಕಾರಿ ಪಾರ್ವತಿ, ಗ್ರೀನ್ ಲ್ಯಾಂಡ್ ಟೈಲ್ಸ್ ಗುಲ್ವಾಡಿ ಪ್ರಕಾಶ್ ಪೂಜಾರಿ ಗುಜ್ಜಾಡಿ, ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಖಾರ್ವಿ ಕೊಡೇರಿ,ಜಗದೀಶ್ ಆಚಾರ್ಯ ಹಟ್ಟಿಯಂಗಡಿ,ರವಿ ದೇವಾಡಿಗ ಬಾಡಬೆಟ್ಟು,ಕೂಡ್ಲು ಬಾಡಬೆಟ್ಟು ಸಣ್ಣಮ್ಮ ಮತ್ತು ಮಲರಣ್ಣ ಉಪಸ್ಥಿತರಿದ್ದರು.ರವಿ ದೇವಾಡಿಗ ಉಪ್ಪಿನ ಕುದ್ರು ಸ್ವಾಗತಿಸಿದರು.ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು, ವಂದಿಸಿದರು.
ಸುಗಮ ಸಂಗೀತ ಭಕ್ತಿ ಗಾಯನ,ಗಾನ ವೈಭವ,ಭಕ್ತಿ ಲಹರಿ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಿತು.