ಗರಿಷ್ಠ ಪ್ರಮಾಣದಲ್ಲಿ ಜನೌಷಧ ಕೇಂದ್ರ ತೆರೆಯಲು ಪ್ರಯತ್ನ : ಬಿ.ವೈ.ರಾಘವೇಂದ್ರ

ತ್ರಾಸಿ: ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶಾದ್ಯಂತ ಕೋಟ್ಯಾಂತರ ಜನರು ಚಿಕಿತ್ಸೆ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಬೈಂದೂರು ಸೇರಿದಂತೆ ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯಲ್ಲಿ 2018ರಿಂದ ಈಚೇಗೆ ಲಕ್ಷಕ್ಕೂ ಅಧಿಕ ಜನರು ಆಯುಷ್ಮಾನ್ ಅಡಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದಕ್ಕಾಗಿ ಕೇಂದ್ರದ ಮೋದಿ ಸರಕಾರ 261 ಕೋಟಿ ರೂ. ವಿನಿಯೋಗಿಸಿದೆ. ಕಡಿಮೆ ಬೆಲೆಯಲ್ಲಿ ಔಷಧ ಒದಗಿಸಲು ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ. ಬೈಂದೂರಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನೌಷಧ ಕೇಂದ್ರ ತೆರೆಯಲು ಪ್ರಯತ್ನ ಮಾಡಲಾಗುವುದು ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ತ್ರಾಸಿಯ ಕೊಂಕಣ ಖಾರ್ವಿ ಸಭಾಭವದಲ್ಲಿ ಮಂಗಳವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ಸಿದ್ಧಾಂತದಲ್ಲಿ ಬೆಳದು ಬಂದ ಅನೇಕರು ನಾವಿಲ್ಲಿ ಸೇರಿದ್ದೇವೆ. ಮುಂದಿನ 25 ವರ್ಷಗಳಲ್ಲಿ ವಿಕಸಿತ ಭಾರತ ಹೇಗಿರಬೇಕು ಎಂಬ ಸ್ಪಷ್ಟ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ನೀಡಿದ್ದಾರೆ. ಭಾರತವು ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಮುಂದಿನ ಕೆಲವೇ ವರ್ಷದಲ್ಲಿ ಪ್ರಧಾನಿ ಮೋದಿಯವರ ಮುಂದಾಳತ್ವದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂದರು.
ಐಎನ್‌ಡಿಐಎ ಅಲೈಯನ್ಸ್ ಕಳಚಿ ಬೀಳುತ್ತಿದೆ ಮತ್ತು ವಿಶ್ವನಾಯಕ ಭಾರತ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಹೆಚ್ಚುತ್ತಲೇ ಇದೆ. ದೇಶದಲ್ಲಿ 68 ವರ್ಷ ಆಡಳಿತ ನಡೆಸಿದ ಬಿಜೆಪಿಯೇತರ ಪಕ್ಷವು ಮಾಡಲಾಗದ ಅಭಿವೃದ್ಧಿಯನ್ನು ಪ್ರಧಾನಿ ಮೋದಿಯವರು ಕಳೆದ 10 ವರ್ಷದಲ್ಲಿ ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ರೈಲ್ವೇ, ರಾಷ್ಟ್ರೀಯ ಹೆದ್ದಾಾರಿ, ವಿಮಾನ ಯಾನ, ಸಾಗರ ಮಾಲಾ(ಜಲ ಸಾರಿಗೆ), ನಿರ್ಮಾಣ ವಲಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಅಮೂಲಾಗ್ರ ಬದಲಾವಣೆಯನ್ನು ಕಳೆದ 10 ವರ್ಷದಲ್ಲಿ ಕಂಡಿದ್ದೇವೆ ಎಂದು ವಿವರಿಸಿದರು.
ಕಾಂಗ್ರೆಸ್‌ಗೆ ಬಡವರ ಬಗ್ಗೆ ಪ್ರೀತಿಯಿಲ್ಲ
ಕಾಂಗ್ರೆಸ್ ಕಳೆದ ಹಲವು ದಶಕಗಳಿಂದ ಬಡತನವನ್ನು ಪ್ರೀತಿಸುತ್ತಲೇ ಬಂದಿದೆಯೇ ವಿನಃ ಬಡವರನ್ನು ಪ್ರೀತಿ ಮಾಡಿಲ್ಲ. ಬಡವರ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ ಇಲ್ಲ. ಗ್ಯಾರಂಟಿಗೆ ರಾಜ್ಯದ ಹಣವನ್ನು ವಿನಿಯೋಗ ಮಾಡುವ ಕಾಂಗ್ರೆಸ್ ಸರ್ಕಾರ ಬರಗಾಲದಲ್ಲೂ ರೈತರ ಕಣ್ಣೀರು ಒರಿಸುವ ಕಾರ್ಯ ಮಾಡಿಲ್ಲ ಎಂದು ದೂರಿದರು.
ಧೀಮಂತ ನಾಯಕರಾದ ಶ್ಯಾಮಪ್ರಾಸದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯರು ಕಂಡ ಕನಸಿನಂತೆ ಪ್ರಧಾನಿ ನರೇಂದ್ರ ಮೋದಿಯವರು ಆಡಳಿತ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಮುಖ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾಾರೆ. ಪಾಕಿಸ್ಥಾನ ಸೇರಿದಂತೆ ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಸಿಎಎ ಜಾರಿ ಮಾಡಲಾಗಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಹೆಸರಿನಲ್ಲಿ ಆಗುತ್ತಿದ್ದ ಅನ್ಯಾಯವನ್ನು ಆರ್ಟಿಕ್ 370 ರದ್ದು ಮಾಡಲಾಗಿದೆ. ದೇಶದ ಭದ್ರತೆಯ ವಿಷಯದಲ್ಲೂ ಹಲವು ಕ್ರಮಗಳನ್ನು ಮೋದಿ ಸರಕಾರ ಕೈಗೊಂಡಿದೆ ಎಂದು ವಿವರಿಸಿದರು.