ಸಿ ಆರ್ ಝೆಡ್ ಸರಳೀಕರಣ,ಕಚೇರಿ ಸ್ಥಳಾಂತರಕ್ಕೆ ಗಂಟಿಹೊಳೆ ಆಗ್ರಹ

ಕುಂದಾಪುರ:ಮರವಂತೆಯಲ್ಲಿ ಕೈಗೊಳ್ಳಲಾಗುತ್ತಿರುವ ಪ್ರವಾಸೋಧ್ಯಮ ಚಟುವಟಿಕೆಗೆ ಸಂಬಂಧಪಟ್ಟಂತಹ ಯೋಜನೆಗಳು ಸಿ ಆರ್ ಝೆಡ್ ಕಾರಣದಿಂದ ಸ್ಥಗಿತಗೊಂಡಿದೆ.ಕೇರಳ,ಗೋವಾ ರಾಜ್ಯಗಳಂತೆ ಕರ್ನಾಟಕದಲ್ಲೂ ಸಿಆರ್‍ಝೆಡ್ ನಿಯಾಮವಳಿಗಳನ್ನು ಸರಳೀಕರಣಗೊಳಿಸುವಂತೆ ಹಾಗೂ ಸಿ ಆರ್ ಝೆಡ್ ಕಚೇರಿಯನ್ನು ಕರಾವಳಿ ಭಾಗಕ್ಕೆ ಸ್ಥಳಾಂತರಿಸುವಂತೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಸದನದಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಬಳಸಿಕೊಂಡು ಆರ್ಥಿಕ ಸಂಪನ್ಮೂಲವನ್ನು ಗಳಿಸಲು ವಿಫುಲವಾದ ಅವಕಾಶಗಳಿವೆ.ಬಹುತೇಕ ರಾಜ್ಯಗಳು ಈ ಅವಕಾಶವನ್ನು ಸಕಾರಾತ್ಮಕವಾಗಿ ಬಳಸಿಕೊಂಡಿವೆ.ಆದರೆ ಕರ್ನಾಟಕ ರಾಜ್ಯ ಈ ವಿಚಾರದಲ್ಲಿ ಉದಾಸೀನತೆ ತೋರುತ್ತಿದೆ ಎಂದು ಪ್ರಾಸೋದ್ಯಮ ಇಲಾಖೆಯ ಕಾರ್ಯವೈಖರಿ ಬಗ್ಗೆ ಶಾಸಕ ಗಂಟಿಹೊಳೆ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದರು.ಬೀಚ್ ಪ್ರವಾಸೋದ್ಯಮ ಕ್ಷೇತ್ರವು ಉದ್ಯೋಗವಕಾಶಗಳ ಆಗರವಾಗಿದದೆ.ಕೆಲವೊಂದು ಕಾನೂನಿನ ಅಡಚಣೆಗಳು ಬೀಚ್ ಪ್ರವಾಸೋದ್ಯಮಕ್ಕೆ ಅಡ್ಡಿ ಮಾಡುತ್ತಿವೆ.ಕಡಲ ಕಿನಾರೆ ಪ್ರವಾಸೋದ್ಯಮಕ್ಕೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದರು.
ಮರವಂತೆ ಅಭಿವೃದ್ಧಿಗೆ ತೊಡಕಾಗಿರುವ ಅಂಶಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮವಹಿಸುವುದಾಗಿ ಪ್ರವಾಸೋದ್ಯಮ ಸಚಿವರ ಪರವಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಶಾಸಕ ಗಂಟಿಹೊಳೆ ಅವರು ಕೇಳಿದ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.



















































































































































































































































































































































































































































































































































































































































































































































































































































































































































































































































































































































































































































































































































































































































































