ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ,ಅಪಘಾತದಲ್ಲಿ ಐವರು ದುರ್ಮರಣ
ಕುಂದಾಪುರ:ಶಿರಸಿ ತಾಲೂಕಿನ ಬಂಡಲ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಮಂಗಳೂರಿನ ಒಂದೇ ಕುಟುಂಬದ ನಾಲ್ವರು ಸಹಿತ ಐವರು ಮೃತಪಟ್ಟಿದ್ದಾರೆ.ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಮಡುಗಟ್ಟಿದೆ.
ಮಂಗಳೂರು ಕಿನ್ನಿಕಂಬಳ ಸಮೀಪದ ಕಂದಾವರದ ನಿವಾಸಿ ರಾಮಕೃಷ್ಣ ರಾವ್ (71), ಅವರ ಪತ್ನಿ ವಿದ್ಯಾಲಕ್ಷ್ಮೀ ರಾವ್ (67), ಪುಷ್ಪಾ ಮೋಹನ್ ರಾವ್ (62), ಸುಹಾಸ ರಾವ್ (30) ಹಾಗೂ ಕಾರು ಚಾಲಕ ಮೂಲತಃ ಸುರತ್ಕಲ್‌ನ, ಪ್ರಸ್ತುತ ಚೆನ್ನೈನಲ್ಲಿರುವ ಅರವಿಂದ (38) ಮೃತಪಟ್ಟವರು.
ಶಿರಸಿಯ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ಶುಕ್ರವಾರ ರಾಮಕೃಷ್ಣ ರಾವ್ ಅವರ ತಮ್ಮನ ಸೊಸೆಯ
ಅಣ್ಣನ ಮದುವೆಗೆ ತೆರಳುತ್ತಿದ್ದರು.ಈ ಸಂದರ್ಭದಲ್ಲಿ ಕುಮಟಾ- ಶಿರಸಿ ಮಾರ್ಗದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಭಟ್ಕಳ ಬಸ್ ಹಾಗೂ ಕಾರಿನ ನಡುವೆಅಪಘಾತ ಸಂಭವಿಸಿದೆ.ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಅಪಘಾತದಲ್ಲಿಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ,ಗಂಭೀರ ಗಾಯಗೊಂಡ ಒಬ್ಬರನ್ನು ರಕ್ಷಿಸಿ
ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮತ್ತೋರ್ವರು ಕಾರಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























































































































































































































































































































































































































































































































































































































































































































































































































































































































































































































































































































































































































































































































































































































































































