ಮಕ್ಕಳ ಕುಣಿತಾ ಭಜನೆ ಪಾದಾರ್ಪಣೆ

ಕುಂದಾಪುರ:ಶ್ರದ್ಧಾ ಭಕ್ತಿಯಿಂದ ಆಚರಣೆಗೊಳ್ಳುವ ಭಜನೆಗೆ ಶತ ಶತಮಾನದ ಇತಿಹಾಸವಿದೆ ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಭಜನೆ ಕಲಿಸುವುದರಿಂದ ಭಾಷೆಯ ಉಚ್ಚಾರದ ಜತೆಗೆ ಜ್ಞಾಪಕ ಶಕ್ತಿ ಕೂಡ ವೃದ್ಧಿಯಾಗುತ್ತದೆ.ಡಿಜಿಟಲ್ ಯುಗದಲ್ಲಿ ಭಜನೆಯನ್ನು ಉಳಿಸುವ ಕೆಲಸ ಆಗಬೇಕು ಎಂದು ಎಂ.ಎಂ ಸುವರ್ಣ ಅರಾಟೆ ಹೇಳಿದರು.
ತಾಲೂಕು ಭಜನಾ ಮಂಡಳಿ ಒಕ್ಕೂಟ ಕುಂದಾಪುರ ಹಾಗೂ ವಂಡ್ಸೆ ವಲಯ ಒಕ್ಕೂಟ ಸಹಯೋಗದೊಂದಿಗೆ ಶ್ರೀರಾಮ ಭಜನಾ ಮಂಡಳಿ ಅರಾಟೆ-ಹೊಸಾಡು ವತಿಯಿಂದ ಅರಾಟೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆದ ಮಕ್ಕಳ ಕುಣಿತಾ ಭಜನೆ ಪಾದಾರ್ಪಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಅಧ್ಯಕ್ಷ ನಿತಿನ್ ವಿಠಲವಾಡಿ ವಿದ್ಯಾರ್ಥಿಗಳಿಗೆ ತಾಳ ವಿತರಿಸಿ ಮಾತನಾಡಿ,ಪ್ರತಿ ದಿನವೂ ಮನೆಯಲ್ಲಿ ಭಜನೆ ಮಾಡುವುದರಿಂದ ಶಾಂತಿ ನೆಲೆಸುವುದರ ಜತೆಗೆ ಮನಸುಗಳು ಕೂಡ ಒಂದಾಗಿ ಇರುತ್ತದೆ.ದೇವರನ್ನು ಒಲಿಸಿಕೊಳ್ಳಲು ಸುಲಭವಾದ ಮಾರ್ಗವೆ ಭಜನೆ ಆಗಿದೆ.ಮನೆ ಮನೆಗಳಲ್ಲಿ ಭಜನೆ ಕ್ರಾಂತಿ ಆರಂಭಗೊಳ್ಳಬೇಕೆಂದು ಹೇಳಿದರು.
ಶ್ರೀರಾಮ ಭಜನಾ ಮಂದಿರ ಅರಾಟೆ-ಹೊಸಾಡು ಅಧ್ಯಕ್ಷ ಸುರೇಶ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಹಿರಿಯ ಭಜಕರಾದ ಕೃಷ್ಣ ಮೊಗವೀರ ಬಸಿಹಿತ್ಲು,ರಘುರಾಮ ಶೆಟ್ಟಿ ಹಾಡಿಮನೆ,ಶಂಕರ ಶೆಟ್ಟಿ,ಮಾಜಿ ಗ್ರಾ.ಪಂ ಸದಸ್ಯರಾದ ರಮೆಶ ಆಚಾರ್ಯ ಅರಾಟೆ,ಸುಮತಿ ಮೊಗವೀರ,ಭಜನಾ ಮಂಡಳಿಗಳ ವಂಡ್ಸೆ ವಲಯಾಧ್ಯಕ್ಷ ಸಂತೋಷ ಪೂಜಾರಿ,ಶ್ರೀರಾಮ ಭಜನಾ ಮಂಡಳಿ ಉಪಾಧ್ಯಕ್ಷ ರಾಮ ಪೂಜಾರಿ ಅರಾಟೆ ಮತ್ತು ಸದಸ್ಯರು ಉಪಸ್ಥಿತರಿದ್ದರು.ಸ್ವಾತಿ ಆಚಾರ್ಯ ಅರಾಟೆ ಸ್ವಾಗತಿಸಿದರು.ಪ್ರದೀಪ ಆಚಾರ್ಯ ವರದಿ ವಾಚಿಸಿದರು.ಶಿಕ್ಷಕಿ ಸ್ಮಿತಾ ಆಚಾರ್ಯ ನಿರೂಪಿಸಿ,ವಂದಿಸಿದರು.ತಾಳ ಹಿಡಿದು ಭಜನೆ ಸಂಕೀರ್ತನೆಗೆ ಹೆಜ್ಞೆ ಹಾಕುವುದರ ಮೂಲಕ ಮಕ್ಕಳು ಕುಣಿತಾ ಭಜನೆಗೆ ಪಾದಾರ್ಪಣೆ ಮಾಡಿದರು.
(ತಾಲೂಕು ಭಜನಾ ಮಂಡಳಿ ಒಕ್ಕೂಟ ಕುಂದಾಪುರ ಹಾಗೂ ವಂಡ್ಸೆ ವಲಯ ಒಕ್ಕೂಟ ಸಹಯೋಗದೊಂದಿಗೆ ಶ್ರೀರಾಮ ಭಜನಾ ಮಂಡಳಿ ಅರಾಟೆ-ಹೊಸಾಡು ವತಿಯಿಂದ ಅರಾಟೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ಮಕ್ಕಳ ಕುಣಿತಾ ಭಜನೆ ಪಾದಾರ್ಪಣೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು)





















































































































































































































































































































































































































































































































































































































































































































































































































































































































































































































































































































































































































































































































































































































































































