ವಂಡ್ಸೆ ಎಸ್ಎಲ್ಆರ್ ಎಂ ಘಟಕದಲ್ಲಿ ಗಬ್ಬು ನಾರುತ್ತಿದೆ ಕಸ:ವಿಲೇವಾರಿಗೆ ಆಗ್ರಹ
ಕುಂದಾಪುರ:ವಂಡ್ಸೆ ಗ್ರಾಮ ಪಂಚಾಯತಿಯ ಹಳೆ ಎಸ್ಎಲ್ಆರ್ ಎಂ ಘಟಕದಲ್ಲಿರುವ ಕಸ ವಿಲೇವಾರಿ ಮಾಡದೆ ಇರುವುದರಿಂದ ಮಳೆಯಲ್ಲಿ ಕೊಳೆತು ಗಬ್ಬು ನಾರುತ್ತಿದೆ ಪರಿಸರದಲ್ಲಿರುವ ಶಾಲಾ ಮಕ್ಕಳಿಗೆ ತೊಂದರೆ ಆಗಿದ್ದು,ಕಸವನ್ನು ವಿಲೇವಾರಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕಸವನ್ನು ಸೂಕ್ತವಾದ ರೀತಿಯಲ್ಲಿ ವಿಲೇವಾರಿ ಮಾಡುವ ದೃಷ್ಟಿಯಿಂದ ಎಸ್ಎಲ್ಆರ್ ಎಂ ಘಟಕವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿಸಲಾಗಿದೆ.ಸಾರ್ವಜನಿಕರಿಂದ ಉತ್ತಮವಾದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಎಸ್ಎಲ್ಆರ್ ಎಂ ಘಟಕದ ಸ್ಥಾಪನೆ ಸಾರ್ಥಕ ಮನೋಭಾವವನ್ನು ಕಂಡಿದೆ.
ವಂಡ್ಸೆ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆ ಬಳಿ ಇದ್ದ ಹಳೆ ಎಸ್ಎಲ್ಆರ್ ಎಂ ಘಟಕವನ್ನು ಜನತಾ ಕಾಲೋನಿ ಬಳಿ ನಿರ್ಮಿಸಿದ ಹೊಸ ಎಸ್ಎಲ್ಆರ್ ಎಂ ಘಟಕಕ್ಕೆ ಪ್ರಸ್ತುತ ಸ್ಥಳಾಂತರ ಮಾಡಲಾಗಿದೆ. ಹಳೆ ಎಸ್ಎಲ್ಆರ್ ಎಂ ಘಟಕದಲ್ಲಿದ್ದ ನಿರೂಪಯುಕ್ತ ಕಸವನ್ನು ಅಲ್ಲೆ ಬಿಟ್ಟಿರುವುದರಿಂದ ಮಳೆ ನೀರಿಗೆ ಕೊಳೆತು ಗಬ್ಬು ನಾರುತ್ತಿದ್ದು,ಕೊಳಚೆ ನೀರು ಘಟಕದ ಹತ್ತಿರದಲ್ಲಿರುವ ಶಾಲೆ ಬಾವಿಗೆ ನುಗ್ಗುತ್ತಿದೆ.ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆಯಲ್ಲಿ ಒಟ್ಟು 420 ಮಕ್ಕಳು ಓದುತ್ತಿದ್ದಾರೆ.ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಳೆ ಎಸ್ಎಲ್ಆರ್ ಎಂ ಘಟಕದ ಆವರಣದಲ್ಲಿರುವ ಕಸವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಂಡ್ಸೆ ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ ಪೂಜಾರಿ ಆಗ್ರಹಿಸಿದ್ದಾರೆ.ಕಸ ವಿಲೇವಾರಿ ಮಾಡಬೇಕೆಂದು ಕಳೆದ ಎರಡು ವರ್ಷಗಳಿಂದ ವಂಡ್ಸೆ ಗ್ರಾಮ ಪಂಚಾಯತ್ ಮತ್ತು ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು, ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದ್ದಾರೆ.
(ವಂಡ್ಸೆ ಅಂಗನವಾಡಿ ಕೇಂದ್ರದ ಬಳಿ ಇರುವ ಹಳೆ ಎಸ್ಎಲ್ ಆರ್ ಎಂ ಘಟಕದ ದುಸ್ಥಿತಿ ನೋಟ)

























































































































































































































































































































































































































































































































































































































































































































































































































































































































































































































































































































































































































































































































































































































































































