ಮಿಷನ್ ಇಂದ್ರ ಧನುಷ್ 5.0 ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ
ಉಡುಪಿ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲೆ ಸಹಯೋಗದಲ್ಲಿ ಮಿಷನ್ ಇಂದ್ರ ಧನುಷ್ 5.0 ಅಭಿಯಾನ ಕಾರ್ಯಕ್ರಮ ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಡಾ.ಕೆ ವಿದ್ಯಾ ಕುಮಾರಿ ಅವರು ಮಿಷನ್ ಇಂದ್ರ ಧನುಷ್ 5.0 ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ಮಕ್ಕಳನ್ನು ಮತ್ತು ಗರ್ಭಿಣಿಯನ್ನು ಕಾಡುವ ಅನೇಕ ಕಾಯಿಲೆಗಳಿಗೆ ಮಿಷನ್ ಇಂದ್ರ ಧನುಷ್ ಅಭಿಯಾನದಲ್ಲಿ ನೀಡುವ ಲಸಿಕೆಗಳು ಪರಿಣಾಮಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ನೀಡಿ,ರೋಗಗಳು ಬಾರದಂತೆ ತಡೆಯಲಿವೆ.ಜಿಲ್ಲೆಯಲ್ಲಿ ಯಾವುದೇ ಅರ್ಹ ಗರ್ಭಿಣಿ ಮತ್ತು ಮಕ್ಕಳು ಈ ಲಸಿಕಾ ಅಭಿಯಾನದಿದಂದ ವಂಚಿತರಾಗದಂತೆ ಎಲ್ಲರಿಗೂ ಲಸಿಕೆ ನೀಡಿ,ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಾಗರೀಕ ಸಮಾಜದಲ್ಲಿನ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ.ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು,ಇದನ್ನೂ ಇನ್ನೂ ಎತ್ತರಕ್ಕೆ ಕೊಂಡೊಯ್ಯ ಬೇಕಿದೆ.
ಜಿಲ್ಲೆಯಲ್ಲಿ ಲಸಿಕೆ ವಂಚಿತ ಗರ್ಭಿಣಿಯರು ಮತ್ತು 0-5 ವರ್ಷದೊಳಗಿನ ಮಕ್ಕಳಿಗೆ ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ 5.0 ಲಸಿಕಾ ಕಾರ್ಯಕ್ರಮವನ್ನು,ಆಗಸ್ಟ್ 7 ರಿಂದ 12 ಮೊದಲನೇ ಸುತ್ತು, ಸೆಪ್ಟಂಬರ್ 11 ರಿಂದ 16 ರ ವರೆಗೆ 2 ನೇ ಸುತ್ತು ಹಾಗೂ ಅಕ್ಟೋಬರ್ 9 ರಿಂದ 14 ರ ವರೆಗೆ ಒಟ್ಟು 3 ಸುತ್ತುಗಳಲ್ಲಿ ಆಯೋಜಿಸಲಾಗುತ್ತಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಂತೆ ವಯಸ್ಸಿಗನುಗುಣವಾಗಿ ಲಸಿಕೆ ಪಡೆಯಲು ಅರ್ಹರಾದ ಮತ್ತು ಲಸಿಕೆ ವಂಚಿತರಾದ ಗರ್ಭಿಣಿ ಮತ್ತು ಮಕ್ಕಳಿಗೆ ಲಸಿಕಾ ಶಿಬಿರ ಆಯೋಜಿಸಿ ಲಸಿಕೆ ನೀಡಲಾಗುವುದು.ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 708 ಗರ್ಭಿಣಿಯರು ಮತ್ತು 0-2 ವರ್ಷದೊಳಗಿನ ಲಸಿಕೆಗೆ ಅರ್ಹರಾದ 3188 ಮಕ್ಕಳಿಗೆ ಹಾಗೂ 2-5 ವರ್ಷದೊಳಗಿನ ಲಸಿಕೆ ವಂಚಿತ 16 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು,ಇದಕ್ಕಾಗಿ 294 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.