ಆಲೂರಿಗೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನೆ
ಕುಂದಾಪುರ:ಆಲೂರು ಮಾರ್ಗಕ್ಕೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಕುಂದಾಪುರ ತಾಲೂಕು ಕಟ್ಟಡ ಕಾರ್ಮಿಕರ ಸಂಘ ಆಲೂರು ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ ಆಲೂರು ಹಾಗೂ ಸ್ಥಳೀಯರ ವತಿಯಿಂದ ಆಲೂರು ಗ್ರಾಮ ಪಂಚಾಯತ್ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ ಕಾಂಡಚಿನ ಪ್ರದೇಶವಾದ ಆಲೂರು ಭಾಗದ ಕೂಲಿ ಕಾರ್ಮಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನಂಪ್ರತಿ ಕುಂದಾಪುರಕ್ಕೆ ತೆರಳುತ್ತಾರೆ ಸುಮಾರು 22.ಕಿಮೀ ದೂರದ ಕುಂದಾಪುರಕ್ಕೆ ತೆರಳಲು ಗ್ರಾಮೀಣ ಪ್ರದೇಶದ ಜನರಿಗೆ ಬಸ್ಸಿನ ಕೊರತೆ ಇದೆ.ಜನರ ಅನುಕೂಲದ ದೃಷ್ಟಿಯಿಂದ ಆಲೂರು-ಕುಂದಾಪುರಕ್ಕೆ ಸರಕಾರಿ ಬಸ್ ಸೌಲಭ್ಯವನ್ನು ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.ಆಲೂರು ಮಾರ್ಗದಲ್ಲಿ ಸರಕಾರಿ ಬಸ್ ಸಂಚಾರ ಮಾಡುವುದರಿಂದ ಹತ್ತಕ್ಕೂ ಅಧಿಕ ಗ್ರಾಮಗಳಿಗೆ ಪ್ರಯೋಜನೆ ಆಗಲಿದೆ ಎಂದು ಹೇಳಿದರು.ಕುಂದಾಪುರ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ,ನಾಗರತ್ನ ನಾಡ,ರವಿ ವಿಎಂ,ಚಂದ್ರಶೇಖರ ವಿ,ಸುಮಿತ್ರಾ ಆಲೂರು,ಗೌರಿ ಆಲೂರು,ಅಂಬಿಕಾ ಉಪಸ್ಥಿತರಿದ್ದರು.ಸರಕಾರಿ ಬಸ್ ಸೌಲಭ್ಯ ಕಲ್ಪಿಸುಂತೆ ಆಲೂರು ಗ್ರಾ.ಪಂ ಅಧ್ಯಕ್ಷರು ಮತ್ತು ಪಿ.ಡಿ.ಒ ಗೆ ಮನವಿಯನ್ನು ಸಲ್ಲಿಸಲಾಯಿತು.ಕಟ್ಟಡ ಕಾರ್ಮಿಕ ಸಂಘ ಆಲೂರು ಅಧ್ಯಕ್ಷ ರಘುರಾಮ ಆಚಾರ್ ಮನವಿಯನ್ನು ಓದಿದರು.ಕಾರ್ಯದರ್ಶಿ ಗಣೇಶ್ ಆಚಾರ್ ವಂದಿಸಿದರು.