ಗಂಗೊಳ್ಳಿ ಮೂಲದ ವ್ಯಕ್ತಿ:ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಸಾವು

ಕುಂದಾಪುರ:ಗಂಗೊಳ್ಳಿ ಜಾಮಿಯಾ ಮೊಹಲ್ಲಾ ಪೊಲೀಸ್ ಚೆಕ್ ಪೋಸ್ಟ್ ಎದುರಿನ ನಿವಾಸಿ ಬಷೀರ್ ಅಹ್ಮದ್ ಎಂಬುವರ ಪುತ್ರ ಮುಬಾಶೀರ್ ಬಷೀರ್ (30) ಸೌದಿ ಅರೇಬಿಯಾದಲ್ಲಿ ಹೃದಯಾಘಾತ ದಿಂದ ಬುಧವಾರ ನಿಧನ ಹೊಂದಿದ್ದಾರೆ.
ಸೌದಿಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಹಾಗೂ ಮೃತರ ಕುಟುಂಬಸ್ಥರು ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ.
ಎರಡು ವರುಷಗಳ ಹಿಂದೆ ಮಹಾರಾಷ್ಟ್ರದ ಪೂನಾ ಮೂಲದ ಯುವತಿಯನ್ನು ವಿವಾಹವಾಗಿದ್ದ ಇವರು, ಪತ್ನಿಯ ಜೊತೆಯಲ್ಲಿಯೇ ಸೌದಿ ಯಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕುಂದಾಪುರ ಹೆಚ್ ಎಂ ಎಂ ಶಾಲೆ,ಪ್ರೌಡ ಶಿಕ್ಷಣವನ್ನು ವಿ.ಕೆ ಆರ್ ಆಂಗ್ಲ ಮಾಧ್ಯಮ ಶಾಲೆ, ಪಿ ಯು ಶಿಕ್ಷಣವನ್ನು ಭಂಡರ್ಕಾರ್ಸ್ ಕಾಲೇಜು, ತದನಂತರ ಇಂಜಿನಿಯರಿಂಗ್ ಪದವಿಯನ್ನು ಭಟ್ಕಳದ ಅಂಜುಮನ್ ಕಾಲೇಜು ಹಾಗೂ ಚೆನ್ನೈ ಯ ಕಾಲೇಜಿನಲ್ಲಿ ಮಾಡಿದ್ದರು.
ಊರಿನಲ್ಲಿದ್ದಾಗ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದ ಅವರು 4 ವರುಷಗಳ ಹಿಂದೆ ತ್ರಾಸಿ ಮರವಂತೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಉಪ್ಪಿನಂಗಡಿ ಮೂಲದ ಬಾಲಕನ ಅಂತ್ಯಸಂಸ್ಕಾರದ ಕಾರ್ಯವನ್ನು, ವಿಧಿವಿಧಾನಗಳನ್ನು ಗಂಗೊಳ್ಳಿಯ ತನ್ನ ಮನೆಯಲ್ಲಿಯೇ ನೇರವೇರಿಸಲು ಅವಕಾಶ ಮಾಡಿ ಕೊಟ್ಟಿದ್ದಲ್ಲದೆ, ಗಾಯಾಳು ಒರ್ವರ ಆಸ್ಪತ್ರೆ ವೆಚ್ಚವನ್ನು ತಾನೇ ಭರಿಸಿದ್ದರು. ಕಷ್ಟದಲ್ಲಿ ಇದ್ದಾಗ ಸಹಾಯ ಮಾಡುವುದಲ್ಲದೇ,ತುರ್ತು ಸಂದರ್ಭ ಹೆಗಲಿಗೆ ಹೆಗಲು ಕೊಡುತ್ತಿದ್ದ ಅವರು.ಕೆಲ ಸಮಯದ ಹಿಂದೆ ಉದ್ಯೋಗಕ್ಕಾಗಿ ಸೌದಿಗೆ ತೆರಳಿದ್ದರು.ಅವರು ಪತ್ನಿ, ತಾಯಿ,ತಂದೆ ಹಾಗೂ ಓರ್ವ ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಅಂತ್ಯಕ್ರಿಯೆ ವಿಧಿವಿಧಾನಗಳ ಬಗ್ಗೆ ಸೌದಿ ದೇಶದ ಕಾನೂನೂ ಕ್ರಮಗಳ ನಂತರವೇ ತಿಳಿದು ಬರಲಿದೆ.





















































































































































































































































































































































































































































































































































































































































































































































































































































































































































































































































































































































































































































































































































































































































































