ಬೈಂದೂರು:ಜಿಲ್ಲಾಧಿಕಾರಿ ಭೇಟಿ, ಪ್ರತಿಭಟನೆ ವಾಪಾಸ್
ಕುಂದಾಪುರ:ಬೈಂದೂರು ತಾಲೂಕಿನ ಶಿರೂರು ಭಾಗದ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚದೇ ಇತರರಿಗೆ ನೀಡಿದ್ದಾರೆ ಇದು ದಲಿತರಿಗೆ ಮಾಡಿದ ಅನ್ಯಾಯ ಎಂದು ದಲಿತ ಮುಖಂಡರು ಆರೋಪಿಸಿ ಬೈಂದೂರು ತಾಲೂಕು ಸೌಧದ ಮುಂದೆ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡಿ ಸರಕಾರದ ಗಮನ ಸೆಳೆದಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಬೈಂದೂರು ತಹಸಿಲ್ದಾರ್, ಕುಂದಾಪುರ ತಾಲೂಕಿನ ಎಸಿ, ಬೈಂದೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ದಲಿತ ಮುಖಂಡರನ್ನು ಮನವೊಲಿಸುವ ಪ್ರಯತ್ನ ಮಾಡಿದರು ಹಾಗೂ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವಂತೆ ಮನವಿ ಮಾಡಿದರು,ದಲಿತ ಮುಖಂಡರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೆ ಧರಣಿ ಮುಂದುವರಿಸುತ್ತೇವೆ ಎಂದು ಹೇಳಿದರು,
ಇಂದು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ದಲಿತ ಮುಖಂಡರ ಸಮಸ್ಯೆಗಳನ್ನು ಆಲಿಸಿ ದಲಿತ ಮುಖಂಡರನ್ನು ಮನವೊಲಿಸಿ, ಬೈಂದೂರು ಹಾಗೂ ಶಿರೂರು ಮುಂತಾದ ಕಡೆ ದಲಿತರಿಗೆ ಮೀಸಲಿಟ್ಟ ಭೂಮಿಗೆ ಬದಲಾಗಿ ಪ್ರತ್ಯೇಕ ಸ್ಥಳ ನೀಡಬೇಕೆಂಬ ಬೇಡಿಕೆಗೆ ಇಲಾಖೆಗಳೊಂದಿಗೆ ಚರ್ಚಿಸಿ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ದಲಿತ ಮುಖಂಡರು ಉಪವಾಸ ಸತ್ಯಾಗ್ರಹ ಧರಣಿ ವಾಪಸು ತೆಗೆದುಕೊಂಡರು.ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್,ಬೈಂದೂರು ತಹಶೀಲ್ದಾರ ಪ್ರದೀಪ್ ಆರ್,ದಲಿತ ಮುಖಂಡ ರಾಘವೇಂದ್ರ ಶಿರೂರು,ಮಾಧವ ಬಾಕಡ,ರಮೇಶ ಶಿರೂರು,ರಾಮ ಎಮ್.ಮಯ್ಯಾಡಿ,ಮಹಾಲಕ್ಷ್ಮೀ ಬೈಂದೂರು,ಈಶ್ವರ ಶಿರೂರು,ವಾಸುದೇವ ಶಿರೂರು ಮೊದಲಾದವರು ಹಾಜರಿದ್ದರು.