ನಾಪತ್ತೆ ಆದ ಶರತ್ ಗಾಗಿ,ಡ್ರೋನ್ ಕ್ಯಾಮೆರಾದ ಮೂಲಕ ಶೋಧ
ಕುಂದಾಪುರ:ಬೈಂದೂರು ತಾಲೂಕಿನ ಕೊಲ್ಲೂರು ಅರಶಿನಗುಂಡಿ ಎಂಬಲ್ಲಿ ಜಲಪಾತಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಭಾನುವಾರ ನಾಪತ್ತೆ ಆದ ಭದ್ರಾವತಿ ಮೂಲದ ನಿವಾಸಿ ಶರತ್ಗಾಗಿ ಜಲಪಾತದ ಆಸುಪಾಸಿನ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾ ಬಿಟ್ಟು ಹುಡುಕಾಟವನ್ನು ತೀವೃಗೊಳಿಸಲಾಗಿದೆ.
ಕೊಲ್ಲೂರು ಅರಶಿನಗುಂಡಿ ಜಲಪಾತಕ್ಕೆ ಬಿದ್ದು ಕಣ್ಮರೆಯಾಗಿ ಆರು ದಿನಗಳಾದರು ಶರತ್ (22) ಗುರುತು ಇನ್ನೂ ಪತ್ತೆ ಆಗಿಲ್ಲ.ಮಗನ ಬರುವಿಕೆಗಾಗಿ ಹೆತ್ತವರು ಜಾತಕ ಪಕ್ಷಿ ಅಂತೆ ಕಾದು ಕುಳಿತಿದ್ದು,ಶರತ್ ಬದುಕಿದ್ದಾನೆ ಎನ್ನುವುದು ಪೋಷಕರ ನಂಬಿಕೆ ಆಗಿದೆ.ಶರತ್ಗಾಗಿ ಇನ್ನಿಲ್ಲದ ಹುಡುಕಾಟವನ್ನು ಮಾಡಿದ್ದ ಪೊಲೀಸ್ ಇಲಾಖೆ ಶುಕ್ರವಾರ ಜಲಪಾತದ ಆಸುಪಾಸಿನ ಬಳಿ ಡ್ರೋನ್ ಕ್ಯಾಮೆರಾ ಬಿಟ್ಟು ಕಾರ್ಯಾಚರಣೆ ಮಾಡಿದೆ.ಕಡಿದಾದ ಮತ್ತು ಇಳಿಜಾರು ಪ್ರದೇಶವನ್ನು ಹೊಂದಿರುವ ಮೂಕಾಂಬಿಕಾ ಅಭಯಾರಣ್ಯದಂತಹ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುವುದು ಸವಾಲಿನ ಸಂಗತಿ ಆಗಿದೆ.ಕಾಡಿನಲ್ಲಿರುವ ಇಂಬಳ ಮತ್ತು ಕಾಡು ಪ್ರಾಣಿಗಳ ಭಯ ರಕ್ಷಣಾ ಸಿಬ್ಬಂದಿಗಳನ್ನು ಕಾಡುತ್ತಿದೆ.ಜಲಪಾತ,ಹೊಳೆ,ಡ್ಯಾಮ್ಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.
ಮುಳುಗು ತಜ್ಞ ದಿನೇಶ್ ಖಾರ್ವಿ ಲೈಟ್ಹೌಸ್ ಗಂಗೊಳ್ಳಿ ನೇತೃತ್ವದ ಜೀವ ರಕ್ಷಕ ತಂಡ ಶರತ್ ಹುಡುಕಾಟದ ಕಾರ್ಯಾಚರಣೆಯಲ್ಲಿ ಭಾಗಿ ಆಗಿ ಪೊಲೀಸ್ ಇಲಾಖೆಗೆ ಸಾಥ್ ನೀಡಿದ್ದರು.











































































































































































































































































































































































































































































































































































































































































































































































































































































































































































































































































































































































































































































































































































































































































