ಚರ್ಮರೋಗ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ನಿರ್ಲಕ್ಷಿಸ ಬಾರದು- ಡಾ.ಕೆ.ಪ್ರೇಮಾನಂದ
ಕುಂದಾಪುರ:ಚರ್ಮರೋಗ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ನಿರ್ಲಕ್ಷಿಸುವುದು ಸರಿಯಲ್ಲ.ಕಾಯಿಲೆ ಇನ್ನಷ್ಟು ಉಲ್ಬಣಗೊಂಡಾಗ ದೇಹದ ಅನ್ಯ ವ್ಯವಸ್ಥೆಗಳ ಮೇಲೂ ಪ್ರಭಾವಬೀರಿ ಸಮಸ್ಯೆ ಸೃಷ್ಟಿ ಆಗುತ್ತದೆ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪ್ರೇಮಾನಂದ ಹೇಳಿದರು.
ಜಿಲ್ಲಾ ಪಂಚಾಯತ್ ಉಡುಪಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಕುಷ್ಠರೋಗ ನಿರ್ಮೂಲನ ವಿಭಾಗ,ತಾಲೂಕು ಆರೋಗ್ಯ ಇಲಾಖೆ,ಸಾಧನಾ ಜನಾರ್ದನ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ಚರ್ಮರೋಗ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಚರ್ಮರೋಗ ತಜ್ಞ ಡಾ.ಉಮೇಶ ನಾಯಕ್ ಕುಷ್ಠರೋಗದ ಕುರಿತು ಮಾಹಿತಿ ನೀಡಿ ಮಾತನಾಡಿ,ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುವ ಬಿಳಿ ಅಥವಾ ತಾಮ್ರ ವರ್ಣದ ನೋವಿಲ್ಲದ ಕಲೆ ಕುಷ್ಠರೋಗದ ಆರಂಭಿಕ ಚಿಹ್ನೆ ಆಗಿದೆ.ಅದನ್ನು ತಕ್ಷಣ ವೈದ್ಯರಿಂದ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದರೆ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿದೆ ಎಂದರು. ಮರವಂತೆ ಪಂಚಾಯಿತಿ ಅಧ್ಯಕ್ಷ ಲೋಕೇಶ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಸಾಧನಾ ಜನಾರ್ದನ ಪ್ರತಿಷ್ಠಾನದ ಆಡಳಿತ ವಿಶ್ವಸ್ತ ಎಸ್.ಜನಾರ್ದನ ಮರವಂತೆ ಮತ್ತು ವಿಶ್ವಸ್ತೆ ಡಾ.ರೂಪಶ್ರೀ,ಆಡಳಿತ ವೈದ್ಯಾಧಿಕಾರಿ ಡಾ.ಕೆ.ಗಣೇಶ ಭಟ್ಟ ಉಪಸ್ಥಿತರಿದ್ದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಹುಲಿಯಪ್ಪ ಗೌಡ ನಿರೂಪಿಸಿದರು.ಆರೋಗ್ಯ ಸುರಕ್ಷಣಾಧಿಕಾರಿ ಅನಿಸ್ ಸ್ಕರಿಯಾ ವಂದಿಸಿದರು.ಶಿಬಿರದಲ್ಲಿ ಭಾಗವಹಿಸಿದ್ದ ಜನರಿಗೆ ಚರ್ಮರೋಗ ತಪಾಸಣೆ ನಡೆಸಿ ಉಚಿತ ಔಷಧ ವಿತರಿಸಲಾಯಿತು.