ಕೋಟೇಶ್ವರದಲ್ಲಿ ಸರಣಿ ಅಪಘಾತ,ಮೂರು ವಾಹನ ಜಖಂ
ಕುಂದಾಪುರ:ರಾಷ್ಟ್ರೀಯ ಹೆದ್ದಾರಿ 66ರ ಕೋಟೇಶ್ವರದ ಗುರುಪ್ರಸಾದ್ ಹೋಟೆಲ್ ಸರ್ಕಲ್ ಸಮೀಪ ಭಾನುವಾರ ಉಡುಪಿಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಮೀನು ಸಾಗಾಟದ ಇನ್ಸುಲೇಟರ್ ಕಂಟೈನರ್ ಲಾರಿಯೊಂದು ವೀಲ್ ಜಾಮ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರು ಹಾಗೂ ಸಮೀಪದಲ್ಲೇ ನಿಂತಿದ್ದ ಸರಕಾರಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಟ್ಟು 3 ವಾಹನಗಳು ಜಖಂಗೊಂಡಿವೆ.ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಕುಟುಂಬವೊಂದು ಕೋಟೇಶ್ವರದ ಕಿನಾರ ಬೀಚ್ ವೀಕ್ಷಿಸಿ ವಾಪಸಾಗುವ ಸಂದರ್ಭ ಕಿನಾರ ರಸ್ತೆಯಿಂದ ಸರ್ವಿಸ್ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಎಂಟ್ರಿಯಾಗಲು ಕಾರನ್ನು ನಿಲ್ಲಿಸಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಮೀಪದಲ್ಲಿಯೇ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ್ದಸರಕಾರಿ ಬಸ್ಸಿಗೂ ಲಾರಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಬಸ್ ಪ್ರಯಾಣಿಕರಿಗೆ, ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳೇನಾಗಿಲ್ಲ.ಘಟನೆಯಲ್ಲಿ ಲಾರಿ ಚಾಲಕ ಸುಮಾರು ಹೊತ್ತು ಲಾರಿಯೊಳಗೆ ಸಿಲುಕಿದ್ದು, ಸ್ಥಳೀಯರ ಕಾಯಾಚರಣೆ ಮೂಲಕ ಹೊರ ತಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಬಸ್ ಹಾಗೂ ಕಾರಿನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆಕರೆದೊಯ್ಯಲು ಸ್ಥಳೀಯರು ಸಹಕರಿಸಿದರು.ಅಪಘಾತದಲ್ಲಿ ಲಾರಿ ಮತ್ತು ಕಾರಿನ ಮುಂಭಾಗ,ಕಾರಿನ ಹಿಂಭಾಗ ಜಖಂಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ತಡೆಬೇಲಿ ಮತ್ತು ಡಿವೈಡರ್‌ಗಳಿಗೂ ಹಾನಿಯಾಗಿದೆ. ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.