ಕಾಡಬೆಟ್ಟು ಹುಲಿ ವೇಷ ತಂಡದ ಮುಖ್ಯಸ್ಥರಾದ ಅಶೋಕ್‌ರಾಜ್ ಕಾಡಬೆಟ್ಟು ನಿಧನ
ಉಡುಪಿ:ಕಾಡಬೆಟ್ಟು ಹುಲಿ ವೇಷ ತಂಡದ ಮುಖ್ಯಸ್ಥರಾದ ಅಶೋಕ್‌ರಾಜ್ ಕಾಡಬೆಟ್ಟು (56) ಗುರುವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರಿಗೆ ತಾಯಿ, ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.ಕಳೆದ ನವರಾತ್ರಿಯಂದು ಬೆಂಗಳೂರಿಗೆ ಹುಲಿವೇಷದ ಪ್ರದರ್ಶನ ನೀಡಲು ಹೋಗಿದ್ದ ಸಂದರ್ಭದಲ್ಲಿ ಅಶೋಕ್ ರಾಜ್ ಕುಸಿದು ಬಿದ್ದಿದ್ದರು. ಚಿಕಿತ್ಸೆಗಾಗಿ ಬೆಂಗಳೂರು, ಮಣಿಪಾಲ, ಉಡುಪಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದರು. 30 ವರ್ಷಗಳಿಂದ ಹುಲಿವೇಷ ತಂಡ ಕಟ್ಟಿದ್ದ ಇವರು ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ ಸಹಿತ ವಿವಿಧ ಉತ್ಸವಗಳಲ್ಲಿ ಕಾಡಬೆಟ್ಟು ಹುಲಿವೇಷ ತಂಡ ಗಮನಾರ್ಹ ಪ್ರದರ್ಶನ ನೀಡುತ್ತಿತ್ತು.ಕಲಾವಿದರಾಗಿದ್ದ ಇವರು ಬೃಹತ್ ಗಾತ್ರದ ಕಟೌಟ್ ತಯಾರಿಸುವುದರಲ್ಲಿಯೂ ಸಿದ್ಧಹಸ್ತರು.