ಉಪ್ಪುಂದ: ಸತೀಶ್ ಕೊಠಾರಿಗೆ ಸಾಧನ ಶ್ರೀ ಉದ್ಯಮ ರತ್ನ ಪ್ರಶಸ್ತಿ ಪ್ರದಾನ
ಬೈಂದೂರು:JCI ಉಪ್ಪುಂದ ದಿಗ್ವಿಜಯ 2023 19ನೇ JC ಸಪ್ತಾಹ ಏಳನೇ ದಿನದ ಸಮಾರೋಪ ಸಮಾರಂಭದಲ್ಲಿ ಸತೀಶ್ ಕೊಠಾರಿ ಅವರಿಗೆ ಸಾಧನ ಶ್ರೀ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸತೀಶ್ ಕೊಠಾರಿ ಅವರು
ಪ್ರಾಥಮಿಕ ಶಿಕ್ಷಣವಾದ 5ನೇ ತರಗತಿಯನ್ನು ಅರ್ಧಕ್ಕೆ ಮುಗಿಸಿ,ಮನೆಯ ಬಡತನವನ್ನು ನೀಗಿಸಬೇಕೆಂಬ ಛಲದೊಂದಿಗೆ ಬೆಂಗಳೂರಿಗೆ ತೆರಳುತ್ತಾರೆ.ಸಣ್ಣ ಪುಟ್ಟ ಹೋಟೆಲ್,ಕ್ಯಾಂಟೀನ್ ಗಳಲ್ಲಿ ಕ್ಲೀನರ್ ಆಗಿ,ವೆಸ್ಟರ್ ಆಗಿ ಕೆಲಸ ಮಾಡುತ್ತಾ ತನ್ನ ಪ್ರಾರಂಭಿಕ ದುಡಿಮೆಯನ್ನು ಆರಂಭಿಸುತ್ತಾರೆ.ಎಷ್ಟೇ ದುಡಿದರೂ ಮನೆಯ ಬಡತನದ ಪರಿಸ್ಥಿತಿ ಸುಧಾರಿಸದೇ ಇರುವುದನ್ನು ಮನಗಂಡು ಇನ್ನೂ ಹೆಚ್ಚಿನ ದುಡಿಮೆಗಾಗಿ ಬೆಂಗಳೂರನ್ನು ಬಿಟ್ಟು,ಅಣ್ಣನ ಜೊತೆಗೆ ದೂರದ ಮುಂಬೈಗೆ ಹೋಗುತ್ತಾರೆ.ಅಲ್ಲಿ ಬೆಳಿಗ್ಗೆಯ ಸಮಯದಲ್ಲಿ ಬೇರೆ ಬೇರೆ ಕೆಲಸ ಮಾಡುತ್ತಾ, ರಾತ್ರಿಯ ಸಮಯದಲ್ಲಿ ಶಾಲೆಗೆ ತೆರಳಿ ಉಳಿದ ತನ್ನ ಪ್ರಾಥಮಿಕ-ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ.10ನೇ ತರಗತಿ ಪಾಸಾದ ನಂತರ ಕ್ಯಾಂಟೀನ್‌ನಲ್ಲಿ ಕೆಲಸ ಮುಂದುವರೆಸಿ, ಸಣ್ಣಪುಟ್ಟ ಕ್ಯಾಂಟೀನ್‌ಗಳನ್ನು ನಡೆಸುತ್ತಾ, ಕ್ಯಾಟರಿಂಗ್ ಉದ್ಯಮದ ಆಳ-ಅಗಲಗಳನ್ನು ಅರಿತು ಅದರಲ್ಲಿನ ಅಪಾರ ಅನುಭವಗಳನ್ನು ಗಳಿಸಿದ ನಂತರ “ಶ್ರೀ ಸ್ವಾಮಿ ಕ್ಯಾಟರಿಂಗ್ಸ್” ಎಂಬ ಬೃಹತ್ ಉದ್ದಿಮೆಯನ್ನು ಪ್ರಾರಂಭಿಸುತ್ತಾರೆ.ಮಹಾನಗರಿ ಮುಂಬೈನ ಗಣ್ಯಾತಿಗಣ್ಯರು, ಸಿನಿಮಾ ತಾರೆ- ಯರು ಇವರ ಕೈ ರುಚಿ ಭೋಜನವನ್ನು ಉಂಡು ಕೊಂಡಾಡಿದ್ದಾರೆ.ತುಂಬಾ ಕಷ್ಟ ಪಟ್ಟು ಹಗಲು ರಾತ್ರಿ ಎನ್ನದೇ ನಿರಂತರವಾಗಿ ದುಡಿದು ಐದು ಜನ ಸಹೋದರಿಯರಿಗೆ ಒಳ್ಳೆಯ ರೀತಿಯಲ್ಲಿ ಮದುವೆ ಮಾಡಿಸುತ್ತಾರೆ, ಅದೇ ರೀತಿ ಕಷ್ಟಪಟ್ಟು ದುಡಿಮೆ ಮಾಡುತ್ತಾ ಇವರ ಕುಟುಂಬವನ್ನು ಒಂದು ಹಂತದ ಉತ್ತಮ ಸ್ಥಿತಿಗೆ ತಂದು ನಿಲ್ಲಿಸುತ್ತಾರೆ. ಪ್ರಸ್ತುತ ನೂರಕ್ಕೂ ಅಧಿಕ ಸಂಖ್ಯೆಯ ಜನರಿಗೆ ಉದ್ಯೋಗ ನೀಡಿ ಅವರ ಜೀವನೋಪಾಯಕ್ಕೆ ಇವರು ಕಾರಣೀಕರ್ತರಾಗಿದ್ದಾರೆ. ಮೃದುಭಾಷಿಗಳು, ಹಿತಭಾಷಿಗಳು, ಸರಳ ವ್ಯಕ್ತಿತ್ವವನ್ನು ಹೊಂದಿದ ಇವರು ಸದಾ ಇನ್ನೊಬ್ಬರ ಒಳತಿಗಾಗಿ ಶ್ರಮಿಸುವವರು. ತಂದೆ ತಾಯಿ ತೋರಿಸಿಕೊಟ್ಟ ದಾರಿಯಂತೆ ಇವರು ಅಪಾರವಾದ ದೈವಭಕ್ತಿಯನ್ನೇ ನೆಚ್ಚಿಕೊಂಡು ದೇವರ ಕೃಪೆ ಇಲ್ಲದೇ ಒಂದು ಹುಲ್ಲು ಕಡ್ಡಿಯು ಅಲುಗಾಡದು ಎಂಬ ಮಾತಿನಂತೆ ಭಗವಂತನ ಸೇವೆಯನ್ನು ಎಷ್ಟು ಮಾಡಿದರೂ ಸಾಲದು ಎನ್ನುತ್ತಾ ಧಾರ್ಮಿಕ-ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.ಸುತ್ತ ಮುತ್ತಲಿನ ಎಲ್ಲಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ತಮ್ಮನ್ನು ತಾನು ತೊಡಗಿಸಿಕೊಂಡವರು
ಇವರ ಕಾರ್ಯವನ್ನು ಗುರುತಿಸಿ ಜೆಸಿಐ ಉಪ್ಪುಂದ ತನ್ನ 19ನೇ ವರ್ಷದ ಜೆಸಿ ಸಪ್ತಾಹದ ಸಮಾರಂಭದಲ್ಲಿ ಬಹಳ ಅಭಿಮಾನಪೂರ್ವಕವಾಗಿ ಸತೀಶ್ ಕೊಠಾರಿ ಅವರಿಗೆ“ಸಾಧನಶ್ರೀ ಉದ್ಯಮರತ್ನ ಪ್ರಶಸ್ತಿ” ಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಇಂದು ಸಂಜೆ ಶ್ವಾನ ಪ್ರದರ್ಶನ, ತದನಂತರ ,ಸ ಮಾ ಹಿ ಪ್ರಾ ಶಾಲೆ ಕಂಚಿಕಾನು ಇಲ್ಲಿಯ ವಿಧ್ಯಾರ್ಥಿಳಿಂದ ವಿವಿಧ ರೀತಿಯ ನೃತ್ಯ ವೈಭವ ಮತ್ತು ಮಂಗಳೂರು ಅರೆಹೊಲಿ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಕಾರಣೀಕ ಕ್ಷೇತ್ರದ ಪುಣ್ಯ ಕಥಾನಕದ ನೃತ್ಯರೂಪಕ ಬಿಡುವನೆ ಬ್ರಹ್ಮಲಿಂಗ ಹಾಗೂ ವಿವಿಧ ನೃತ್ಯ ವೈಭವ ನಡೆಯಿತು.ಈ ಸಂದರ್ಭದಲ್ಲಿ ವಿವಿಧ ಗಣ್ಯರುJCI ಉಪ್ಪುಂದದ ಅಧ್ಯಕ್ಷರು ,ಉಪಾಧ್ಯಕ್ಷರು, ಕಾರ್ಯದರ್ಶಿ, ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.



























































































































































































































































































































































































































































































































































































































































































































































































































































































































































































































































































































































































































































































































































































































































































