ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ 50ನೇ ವಾರ್ಷಿಕ ಸಾಮಾನ್ಯ ಸಭೆ
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಮಂಗಳವಾರ ನಡೆಯಿತು.ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುಣವಂತ ನಾಯರಿ ಅವರು 2023-24ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮಾಡಿದರು.ಅಧ್ಯಕ್ಷರು ಸಂಘದ ಸದಸ್ಯರಿಂದ ಅನುಮೋದನೆ ಪಡೆದು ಕೊಂಡು.ಸಂಘದ ಸದಸ್ಯರಿಗೆ 20% ಡಿವಿಡೆಂಡ್ ಮತ್ತು ಸಂಘದ ಹಾಲು ಉತ್ಪಾದಕರಿಗೆ 65% ಬೋನಸ್ ಘೋಷಣೆ ಮಾಡಿದರು.



ಹಾಲು ಉತ್ಪಾದನೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹೈನುಗಾರರಾದ ಸಾಧು ನಾಗೂರು ಮನೆ, ಸುದೀಪ್ ಬಳೆಗಾರ,ಗೋವಿಂದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಪ್ರಗತಿಪರ ಕೃಷಿಕರಾದ ಮುತ್ತು ದೇವಾಡಿಗ, ಸರೋಜಿನಿ ಶೇಟ್ ಮತ್ತು ಲೈನ್ ಮ್ಯಾನ್ ಶಿವರಾಮ ದೇವಾಡಿಗ ಅವರನ್ನು ಗೌರವಿಸಲಾಯಿತು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಅಂಗವಾಗಿ ಸಂಘದ ಸದಸ್ಯರಿಗೆ ಉಡುಗೊರೆಯನ್ನು ನೀಡಲಾಯಿತು.
ಆರೋಗ್ಯ ಮಾಹಿತಿ ಪ್ರಯುಕ್ತ ಸಂಘದ ಸದಸ್ಯರಿಗೆ ಬಿ.ಪಿ ಮತ್ತು ರಕ್ತ ಪರೀಕ್ಷೆ ಮಾಡಲಾಯಿತು.
ಪಶು ವೈದ್ಯಾಧಿಕಾರಿ ಶಂಕರ ಶೆಟ್ಟಿ ಪಶು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.


ಕೆ.ಎಂ.ಎಫ್ ಒಕ್ಕೂಟ ಅಧಿಕಾರಿ ರಾಜಾರಾಮ ಅವರು ಸೌಲಭ್ಯದ ಕುರಿತು ಮಾಹಿತಿ ನೀಡಿ ಮಾತನಾಡಿ,ಉಭಯ ಜಿಲ್ಲೆಗಳಲ್ಲಿ ಈ ಹಿಂದೆ 5 ಲಕ್ಷಕ್ಕೂ ಅಧಿಕ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ 3.18 ಲಕ್ಷ ಲೀಟರ್ ಗೆ ಇಳಿದಿದೆ.ಸರಕಾರ ಮತ್ತು ಇಲಾಖೆ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಸಂಘದ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಲ್ಲಿ ತೊಡಗಿ ಕೊಳ್ಳಬೇಕು ಎಂದು ಹೇಳಿದರು.ಪ್ರೋತ್ಸಾಹ ಧನ ಸೇರಿ ಪ್ರಸ್ತುತ ಸಂಘದ ಸದಸ್ಯರಿಗೆ ಲೀಟರ್ ಒಂದರ ಹಾಲಿನ ಮೇಲೆ 41.25 ರೂಪಾಯಿ ದೊರೆಯುತ್ತಿದೆ.ಮಿನಿ ಡೈರಿ ಮಾಡಲು ಅವಕಾಶಗಳಿದ್ದು ಹತ್ತು ಸಾವಿರ ರೂಪಾಯಿ ವರೆಗೆ ಪ್ರೋತ್ಸಾಹ ಧನ ಸಿಗುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಲಾಭ ಪಡೆದು ಕೊಳ್ಳಬೇಕು ಎಂದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆ ಎನ್ನುವುದು ಗ್ರಾಮೀಣ ಪ್ರದೇಶದ ಜನರ ಬದುಕಾಗಿದೆ.
ಸೊಸೈಟಿ ಮತ್ತು ಡೈರಿ ವ್ಯವಸ್ಥೆಯಿಂದ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗಿದ್ದು.
ಕಷ್ಟ ಸುಖದ ನಡುವೆ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಸಂಸಾರದ ಹೊಣೆಯನ್ನು ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.ಬೈಂದೂರು ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿರುವ ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಮಾತನಾಡಿ,ಸಂಘದ 50ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿರುವುದು ಮಹತ್ತರವಾದ ಬೆಳವಣಿಗೆ ಆಗಿದೆ.ಸಂಘದ ಸದಸ್ಯರ ಅನುಕೂಲಕ್ಕಾಗಿ ಹಾಲು ಸಂಗ್ರಹಣಾ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಂಘದ ಮಹಿಳಾ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಿದೆ.ಆರೋಗ್ಯ ಮಾಹಿತಿ ಸಹಿತ ಉತ್ತಮ ಹಾಲು ಉತ್ಪಾದಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಕೂಡ ಮಾಡಲಾಗಿದೆ ಎಂದರು.ಸಂಘವು ಪ್ರಸ್ತುತ ಸಾಲಿನಲ್ಲಿ 3,16,827.31 ಪೈಸೆ ಲಾಭ ಗಳಿಸಿದ್ದು.ಹಾಲು ಉತ್ಪಾದಕ ಸದಸ್ಯರಿಗೆ 65% ಬೋನಸ್ ಹಾಗೂ ಸದಸ್ಯರಿಗೆ 20% ಡಿವಿಡೆಂಡ್ ಘೋಷಿಸಿದರು.ಹಾಲು ಉತ್ಪಾದನೆಯಲ್ಲಿ ತೊಡಗಿ ಕೊಳ್ಳುವುದರ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಶಾರದ ದೇವಾಡಿಗ, ನಿರ್ದೇಶಕರಾದ ಪದ್ಮನಾಭ ಹೆಬ್ಬಾರ್, ವಿಶ್ವನಾಥ್ ಹವಾಲ್ದಾರ್ .ಕೆ, ಗೋಪಾಲ ದೇವಾಡಿಗ,ನೀಲು ಯಾನೆ ಸರೋಜಾ,ಸುಬ್ಬು,ಸರೋಜ, ಸುಮಂಗಲ ಕಾರಂತ,ವಿಶಾಲ ಉಪಸ್ಥಿತರಿದ್ದರು.
ಪದ್ಮನಾಭ ಹೆಬ್ಬಾರ್ ಸ್ವಾಗತಿಸಿದರು.ವಿಶಾಲ ದೇವಾಡಿಗ ಪ್ರಾರ್ಥಿಸಿದರು.ಉಪಾಧ್ಯಕ್ಷೆ ಶಾರದ ವಂದಿಸಿದರು.