ಮುಳ್ಳಿಕಟ್ಟೆ ಸೊಸೈಟಿಯಲ್ಲಿ ಕಳ್ಳತನಕ್ಕೆ ಯತ್ನ,ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ ಪೊಲೀಸರು
ಕುಂದಾಪುರ:ಸಿಸಿ ಟಿವಿ ಮಾನಿಟರಿಂಗ್ ತಂಡದ ಸೂಚನೆ ಮೇರೆಗೆ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಅದರ ಹೊಸಾಡು-ಮುಳ್ಳಿಕಟ್ಟೆ ಶಾಖೆ ಕಟ್ಟಡದ ಕಿಟಕಿ ಬಾಗಿಲಿನ ಸರಳನ್ನು ಮುರಿದು ಒಳನುಗ್ಗಿ ಕಳ್ಳತನವನ್ನು ಮಾಡಲು ಯತ್ನಿಸುತ್ತಿದ್ದ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪ್ರಕಾಶ್ ಬಾಬು (44) ಎಂಬಾತನನ್ನು ಗಂಗೊಳ್ಳಿ ಪೊಲೀಸ್ ಠಾಣೆ ಗುಪ್ತಚರ ಪಿಎಸ್‍ಐ ಬಸವರಾಜ್ ಕಣಶೆಟ್ಟಿ ಮತ್ತು ಸಿಬ್ಬಂದಿಗಳು ಮಿಂಚಿನ ಕಾರ್ಯಚರಣೆ ಮೂಲಕ ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಶುಕ್ರವಾರ ತಡ ರಾತ್ರಿ 1.44 ರ ಸುಮಾರಿಗೆ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಅದರ ಮುಳ್ಳಿಕಟ್ಟೆ ಶಾಖೆ ಕಟ್ಟಡದ ಕಿಟಕಿ ಬಾಗಿಲಿನ ಸರಳನ್ನು ಮುರಿದು ಒಳನುಗ್ಗಿ ಮೇಜಿನ ಡ್ರಾವರ್ ಜಾಲಾಡುತ್ತಿರುವ ದೃಶ್ಯ ಅಂಕದಕಟ್ಟೆಯಲ್ಲಿ ಕಾರ್ಯಚರಣೆ ಮಾಡುತ್ತಿರುವ ಸೈನ್ ಇನ್ ಸೆಕ್ಯೂರಿಟಿ ಲೈವ್ ಮಾನಿಟರಿಂಗ್ ತಂಡದ ಸಿಬ್ಬಂದಿಗಳ ಗಮನಕ್ಕೆ ಬಂದಿದೆ.ಕಛೇರಿ ಸಿಬ್ಬಂದಿಗಳು ಕೂಡಲೆ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.ತಕ್ಷಣ ಕಾರ್ಯಪ್ರವೃತರಾದ ಗಂಗೊಳ್ಳಿ ಪೆÇಲೀಸ್ ಠಾಣೆ ಗುಪ್ತಚರ ಪಿಎಸ್‍ಐ ಬಸವರಾಜ್ ಕಣಶೆಟ್ಟಿ ನೇತೃತ್ವದ ಬೀಟ್ ಪೊಲೀಸ್ ತಂಡ ಮಾಹಿತಿ ಸಿಕ್ಕ ಹತ್ತೆ ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ ಕ್ಷೀಪ್ರ ಕಾರ್ಯಚರಣೆ ಮೂಲಕ ಆರೋಪಿ ಕೇರಳದ ಮೂಲದ ಬಾಬು ಎಂಬುವವನನ್ನು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.ಹಲವು ಪ್ರಕರಣಗಳಲ್ಲಿ ಭಾಗಿದಾರನಾಗಿರುವ ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.