ಮೇಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಹಬ್ಬ
ಕುಂದಾಪುರ:ಬೈಂದೂರು ತಾಲೂಕಿನ 11ನೇ ಉಳ್ಳೂರು ಮೂಡುಮರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಮೇಕೋಡು ವಾರ್ಷಿಕ ಹಬ್ಬ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಅಮ್ಮನವರ ವಾರ್ಷಿಕ ಹಬ್ಬದ ಪ್ರಯುಕ್ತ ಚಂಡಿಕಾಹೋಮ,ಕಲಶಾಭಿಷೇಕ,ಮಹಾಮಂಗಳಾರತಿ,ಪಂಚವಿಂಶತಿ ಕಲಶಸ್ಥಾಪನೆ,ಕಲಾತತ್ವಹೋಮ,ಅಧಿವಾಸಹೋಮ,ಗಣಪತಿ ಪ್ರಾರ್ಥನೆ,ಮಹಾ ಅನ್ನಸಂತರ್ಪಣೆ, ಹಾಗೂ ಪೆರ್ಡೂರು ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಜರುಗಿತು.ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರಿಗೆ ಹರಕೆಯನ್ನು ಸಲ್ಲಿಸಿ ಅನ್ನಪ್ರಸಾದ ಸ್ವೀಕರಿಸಿದರು.
ಮೇಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ,ಸುಮಾರು 45 ವರ್ಷಗಳಿಂದ ದಾನಿಗಳು ಹಾಗೂ ಭಕ್ತರ ಸಹಕಾರದಿಂದ ವಾರ್ಷಿಕ ಹಬ್ಬವನ್ನು ಬಹಳ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ.ದೇವಿಗೆ ಚಂಡಿಕಾ ಹೋಮ ಸಹಿತ ನಾನಾ ಧಾರ್ಮಿಕ ಪೂಜೆಗಳನ್ನು ನಡೆಸಲಾಗಿದೆ ಎಂದರು.ಗೋವುಗಳನ್ನು ದೇವರಿಗೆ ಅರ್ಪಿಸುವುದು ಇಲ್ಲಿನ ವಿಶೇಷವಾಗಿದ್ದು ಏಲಂ ಮುಖಾಂತರ ಹರಾಜು ಪ್ರಕ್ರಿಯೆ ಮಾಡಲಾಗುತ್ತದೆ.ಆರು ಗ್ರಾಮಕ್ಕೆ ಸಂಬಂಧಿಸಿದ ದೇವಸ್ಥಾನ ಇದ್ದಾಗಿದ್ದು ಬಹಳಷ್ಟು ಕಾರಣಿಕ ಸ್ಥಳವಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ನೂಜಾಡಿ ಪದ್ಮನಾಭ ಅಡಿಗ,ಉತ್ಸವ ಸಮಿತಿ ಹಾಗೂ ಆಡಳಿತ ಸಮಿತಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಉಳ್ಳೂರು ವೇದಮೂರ್ತಿ ವಾಸುದೇವ ಐತಾಳ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.






















































































































































































































































































































































































































































































































































































































































































































































































































































































































































































































































































































































































































































































































































































































































































