ಈಶ್ವರಪ್ಪ ಅವರಿಗೆ ನೀಡಿದ ಬೆಂಬಲ ವಾಪಾಸ್-ಬಿ.ವೈ ರಾಘವೇಂದ್ರಪರ ಪ್ರಚಾರ ಶ್ರೀಧರ ಬಿಜೂರು
ಬೈಂದೂರು:ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿ ಮತಗಳನ್ನು ಟಾರ್ಗೆಟ್ ಮಾಡಿ,ಕಾಂಗ್ರೆಸ್ ಗೆಲ್ಲಿಸುವ ಮಾನಸಿಕತೆಯಲ್ಲಿದ್ದದ್ದು ನಮಗೆ ಅರಿವಿಗೆ ಬಂದಿದೆ.ಹೀಗಾಗಿಯೇ ರಾಷ್ಟ್ರಭಕ್ತರಾದ ನಾವೆಲ್ಲರೂ ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡುತ್ತೇವೆ ಮತ್ತು ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಕೆಲಸ ಮಾಡಲಿದ್ದೇವೆ.ಈಶ್ವರಪ್ಪ ಅವರಿಗೆ ನೀಡಿದ ಬೆಂಬಲವನ್ನು ವಾಪಾಸ್ ಪಡೆದಿದ್ದೇವೆ ಎಂದು ರಾಷ್ಟ್ರಭಕ್ತರ ಬಳಗದ ಶ್ರೀಧರ್ ಬಿಜೂರ್ ಹೇಳಿದರು.
ಬೈಂದೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಾರ್ಯಕರ್ತರ ಕಡೆಗಣನೆ ಆಗುತ್ತಿದೆ ಎನ್ನುವ ಕಾರಣಕ್ಕೆ ಪಕ್ಷದಿಂದ ದೂರಾಗಿದ್ದು ನಿಜ.ಅದೇ ಸಂದರ್ಭದಲ್ಲಿ ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಸ್ಪರ್ಧೆಗೆ ಇಳಿದಿದ್ದರು.ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಬಂದಿದ್ದರಿಂದ ಅವರೊಂದಿಗೆ ಸೇರಿಕೊಂಡಿದ್ದೇವು.ಈಗ ನಿಜಾಂಶ ಅರಿವಾಗಿದೆ. ಕಾಂಗ್ರೆಸ್ ಗೆಲ್ಲಿಸಲು ಅವರು ಶ್ರಮಿಸುತ್ತಿದ್ದಾರೆ ಮತ್ತು ಬಿಜೆಪಿ ಮತವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.ಹೀಗಾಗಿ ಅವರಿಗೆ ನಮ್ಮ ಬೆಂಬಲ ಇಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಣ್ಣಪುಟ್ಟ ವ್ಯತ್ಯಾಸಗಳು ಆಗಿರಬಹುದು.ಅದೆಲ್ಲವನ್ನು ಸರಿಪಡಿಸುವ ಭರವಸೆಯನ್ನು ಪಕ್ಷದ ಹಿರಿಯರು ನೀಡಿದ್ದಾರೆ. ಅಲ್ಲದೆ, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನೇಹಾಳ ಹತ್ಯೆಯ ನಂತರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದುಕೊಂಡ ರೀತಿ ನಮ್ಮನ್ನು ಇನ್ನಷ್ಟು ಚಿಂತಿಗೆ ಈಡುಮಾಡಿದೆ.ಜಿಹಾದಿ ಮಾನಸಿಕತೆಗಳು ಹೆಚ್ಚುತ್ತಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಮತಗಳನ್ನು ಟಾರ್ಗೆಟ್ ಮಾಡುವುದಿಲ್ಲ.ಬಿಜೆಪಿ ಪರವಾಗಿ ಕೆಲಸ ಮಾಡುತ್ತೇವೆ. ಸಂಸದರಾದ ಬಿ.ವೈ.ರಾಘವೇಂದ್ರ ಅವರ ಕೈ ಬಲಪಡಿಸುವ ಕಾರ್ಯ ಮಾಡಲಿದ್ದೇವೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ,ಈಶ್ವರಪ್ಪನವರು ನಮ್ಮ ಪಕ್ಷದ ಕೆಲವು ಕಾರ್ಯಕರ್ತರನ್ನು ಸೆಳೆದಿರುವುದು ನಿಜ. ಈಶ್ವರಪ್ಪರಿಂದ ಮೋಸ ಹೋಗಿರುವ ಬಗ್ಗೆ ಅವರಿಗೆ ಬಂದಿರುವುದರಿಂದ,ಪುನರ್ ಬಿಜೆಪಿಗೆ ಬಂದಿದ್ದಾರೆ.ಹೀಗಾಗಿ ಬಿಜೆಪಿ ಅಭ್ಯರ್ಥಿ ಪರವಾಗಿ, ನರೇಂದ್ರ ಮೋದಿಯವರನ್ನು ಇನ್ನೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ.ಸ್ಥಳೀಯವಾಗಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದರು.
ಶಾಸಕರಾದ ಗುರುರಾಜ ಗಂಟಿಹೊಳೆ,ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಂಡಲ ಖಜಾಂಚಿ ಶ್ರೀಗಣೇಶ್ ಗಾಣಿಗ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.






















































































































































































































































































































































































































































































































































































































































































































































































































































































































































































































































































































































































































































































































































































































































































