ನಾವುಂದ:ಸಪರಿವಾರ ಶ್ರೀ ಪಾದ್ಮಾವತಿ ಅಮ್ಮನವರ ವರ್ಧಂತ್ಯೋತ್ಸವ,ಶ್ರೀರಾಮ ದೇವರ ಪ್ರತಿಷ್ಠೆ
ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸಪರಿವಾರ ಶ್ರೀ ಪಾದ್ಮಾವತಿ ಅಮ್ಮನವರ ದೇವಸ್ಥಾನದ ಷುಷ್ಠಿ ಮಹೋತ್ಸವ ಹಾಗೂ ಶ್ರೀರಾಮ ನೂತನ ಭಜನಾ ಮಂದಿರ ಲೋಕಾರ್ಪಣೆ ಮತ್ತು ಶ್ರೀರಾಮ ದೇವರ ಬಿಂಬ ಪ್ರತಿಷ್ಠೆ,ಶ್ರೀ ಬೊಬ್ಬರ್ಯ ದೇವರಿಗೆ ಬೆಳ್ಳಿ ಮುಖವಾಡ ಸಮರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಬುಧವಾರ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕರಾದ ವೇದ ಮೂರ್ತಿ ಪರಮೇಶ್ವರ ಅಡಿಗರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಮಹಾ ಅನ್ನಪ್ರಸಾದವನ್ನು ಸ್ವೀಕರಿಸಿದರು.ಯಕ್ಷಗಾನ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಭಾಸ್ಕರ ಪುತ್ರನ್ ಮಾತನಾಡಿ,ಪ್ರಶ್ನಾ ಚಿಂತನಾ ಕಾರ್ಯದಲ್ಲಿ ತಿಳಿದು ಬಂದಂತೆ ತಾಯಿ ಪದ್ಮಾವತಿ ಅಮ್ಮನವರ ಪುಷ್ಠಿ ಮಹೋತ್ಸವ ಹಾಗೂ ಶ್ರೀರಾಮ ದೇವರ ಅಮೃತ ಶಿಲೆಯ ಬಿಂಬ ಪ್ರತಿಷ್ಠಾಪನೆ ಮತ್ತು ನೂತನ ಭಜನಾ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ದಾನಿಗಳು ಮತ್ತು ಊರಿನವರ ಸಹಕಾರದಿಂದ ವಿಜೃಂಭಣೆಯಿಂದ ನಡೆದಿದೆ.ಶ್ರೀ ಬೊಬ್ಬರ್ಯ ದೇವರಿಗೆ ಬೆಳ್ಳಿ ಮುಖವಾಡ ಸಮರ್ಪಣೆ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಪರಮೇಶ್ವರ ಅಡಿಗ ಅವರು ಮಾತನಾಡಿ, ಅಮ್ಮನವರ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಮತ್ತು ಶ್ರೀರಾಮ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಸಮಾಪನೆ ಗೊಂಡಿದೆ ಎಂದು ಹೇಳಿದರು.ಕ್ಷೇತ್ರದ ನಾಗದೇವರಿಗೆ ಆಶ್ಲೇಷಾ ಬಲಿಯನ್ನು ನೆರವೇರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಏಪ್ರಿಲ್ 25 ರಂದು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರು ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ.ರಾಮ ಭಜನೆಯ ದೀಪಸ್ಥಾಪನೆ ಸಹಿತ ಆಶೀರ್ವಚನ ನೀಡಲಿದ್ದಾರೆ.
ಏಪ್ರಿಲ್ 29 ರಂದು ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.ಶ್ರೀರಾಮ ದೇವರಿಗೆ ನೂತನ ಪಲ್ಲಕ್ಕಿ ಸಮರ್ಪಣೆ ಕಾರ್ಯಕ್ರಮ ಜರುಗಲಿದೆ.ಬಳಿಕ ಸ್ವಾಮಿಜಿಗಳು ಆಶೀರ್ವಚನ ನೀಡಲಿದ್ದಾರೆ.ಮೇ 01 ರಂದು ಅಖಂಡ ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ,ಸಾಯಂಕಾಲ ಪುರಮೆರವಣಿಗೆ ಜರುಗಲಿದೆ.ಮೇ 02 ರಂದು ಭಜನಾ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ.
ವರದಿ:-ಜಗದೀಶ ದೇವಾಡಿಗ
ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048