ವಿಶೇಷವಾಗಿ ರೈತರು,ಮೀನುಗಾರರು,ಕಾಫಿ ಬೆಳೆಗಾರರು ಕೈ ಹಿಡಿಯಲಿದ್ದಾರೆ-ಜಯಪ್ರಕಾಶ್ ಹೆಗ್ಡೆ

ಕುಂದಾಪುರ:ಉಡುಪಿ ಜಿಲ್ಲೆ ರಚನೆ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರ ಜತೆಗೆ ರೈತರು,ಮೀನುಗಾರರು,ಕಾಫಿ ಬೆಳೆಗಾರರಿಗೆ ಮಾಡಿದಂತಹ ಅನುಕೂಲತೆಗಳು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಸಮಯದಲ್ಲಿ ತೊಡಗಿಸಿಕೊಂಡಿದ್ದರಿಂದ ಜನರು ನನ್ನನ್ನು ಬೆಂಬಲಿಸಿ ಮತವನ್ನು ನೀಡಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಗುರುವಾರ ತಮ್ಮ ಸ್ವಗ್ರಹದಲ್ಲಿ ಮಾಧ್ಯಮ ಮಿತ್ರರೊಂದಿಗೆ ತಮ್ಮ ಚುನಾವಣಾ ಪೂರ್ವ ತಯಾರಿ ಕುರಿತು ಹಾಗೂ ಜನರು ತಮ್ಮ ಮೇಲಿಟ್ಟಿರುವ ಪ್ರೀತಿ ವಿಶ್ವಾಸದ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡರು.
ಬ್ಲಾಕ್ ಸಮಿತಿಗಳನ್ನು ಆರಂಭಿಸಿಕೊಂಡು ಈಗಾಗಲೇ ಚುನಾವಣೆ ಪೂರ್ವ ಸಿದ್ಧತೆಯನ್ನು ಆರಂಭಿಸಲಾಗಿದೆ.ಕುಂದಾಪುರ ಸಹಿತ ಉಡುಪಿ,ಕಾರ್ಕಳ,ಕಾಪು,ಹೆಬ್ರಿ ತಾಲೂಕುಗಳಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ತನ್ನ ಒಡನಾಡಿಗಳು ಹಾಗೂ ಕ್ಷೇತ್ರದ ಜನರು ಈಗಾಲೇ ಅಭೂತ ಪೂರ್ವ ಬೆಂಬಲವನ್ನು ವ್ಯಕ್ತಪಡಿಸಿರುವ ಕುರಿತು ಸಂತೋಷವನ್ನು ಹಂಚಿಕೊಂಡ ಜಯಪ್ರಕಾಶ್ ಹೆಗ್ಡೆ ಅವರು ರಾಜಕೀಯ ಕ್ಷೇತ್ರ ಎನ್ನುವುದು ಉದ್ಯಮವಲ್ಲ ಸಾಮಾಜಿಕ ಕೆಲಸಗಳನ್ನು ಮಾಡಲು ಜನರು ನೀಡುವ ಒಂದು ಉತ್ತಮವಾದ ಅವಕಾಶವಾಗಿದೆ ಅದನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಕ್ಷೇತ್ರದ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದನೆ ನೀಡುವುದಾಗಿ ಹೇಳಿದರು.ಬಹಳಷ್ಟು ವರ್ಷಗಳಿಂದ ರಾಜಕೀಯ ಮತ್ತು ಸಾಮಾಜಿಕ ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಅನುಭವದ ಆಧಾರದ ಮೇಲೆ ಅಭಿವೃದ್ಧಿಯಲ್ಲಿ ಹಿಂದುಳಿದ ಕ್ಷೇತ್ರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಗೊಳಿಸಲು ಪ್ರಯತ್ನಿಸಲಾಗುವುದು ಎಂದರು.ಯುವ ಮತದಾರರು ಸಹಿತ ಕ್ಷೇತ್ರದ ಎಲ್ಲಾ ಸಮುದಾಯದ ಜನರು ತಮ್ಮ ಮತವನ್ನು ನೀಡುವುದರ ಮೂಲಕ ಆಶೀರ್ವಾದ ಮಾಡಬೇಕೆಂದು ವಿನಂತಿಸಿಕೊಂಡರು.
ಯಾರ ಮೇಲೂ ನನಗೆ ವೈಯಕ್ತಿಕವಾದ ದ್ವೇಷ ಇಲ್ಲಾ,ಸುಖಾಸುಮ್ಮನೆ ಯಾರ ಮೇಲೂ ಅಪವಾದ ಮಾತುಗಳನ್ನು ನಾನು ಆಡುವುದಿಲ್ಲ ನನ್ನ ಬಗ್ಗೆ ಜನರಿಗೆ ಗೊತ್ತಿದೆ ಎಂದರು.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನನ್ನ ಸಹೋದರರು ಅವರ ಆಶೀರ್ವಾದವನ್ನು ಈಗಾಗಲೆ ಪಡೆದಿದ್ದೇನೆ.ಅವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ಕರೆಯುವುದು ಸರಿಯಲ್ಲ,ನಮಗೆ ಅವರ ಆರೋಗ್ಯ ಮುಖ್ಯವಾಗಿದೆ.ಕ್ಷೇತ್ರದ ಜನರ ಬೆಂಬಲ ಮತ್ತು ಅವರ ಬೆಂಬಲವೂ ನನಗೆ ದೊರಕಲಿದೆ ಎಂದರು.
:- ಸುದ್ದಿಗಳನ್ನು ನಮ್ಮ ಜಾಲಾತಾಣದಲ್ಲಿ ಬಿತ್ತರಿಸಲು ಸಂಪರ್ಕಿಸಿ-9916284048











































































































































































































































































































































































































































































































































































































































































































































































































































































































































































































































































































































































































































































































































































































































































