ಗಂಗೊಳ್ಳಿಯಲ್ಲಿ ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ

ಕುಂದಾಪುರ:ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಕೊಂಕಣಿ ಖಾರ್ವಿ ಸಮಾಜ ಬಾಂಧವರು ಸಂಭ್ರಮದಿಂದ ಮಂಗಳವಾರ ಆಚರಿಸಿದರು.ರಂಗು ರಂಗಿನ ಬಣ್ಣಗಳನ್ನು ಒಬ್ಬರಿಂದೊಬ್ಬರಿಗೆ ಎರಚುತ್ತಾ ನೃತ್ಯ ಹಾಡುಗಾರಿಕೆಯೊಂದಿಗೆ ತಮ್ಮ ವಿನೋದವನ್ನು ವ್ಯಕ್ತಪಡಿಸುತ್ತಾ ಬಣ್ಣದೋಕುಳಿಯಲ್ಲಿ ಜನರು ಮಿಂದೆದ್ದರು.ಗಂಗೊಳ್ಳಿ ಶ್ರೀ ವಿರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸಂಪ್ರಾದಾಯಿಕ ಹೋಳಿ ಹಬ್ಬದ ಮೆರವಣಿಗೆ ಗಂಗೊಳ್ಳಿ ಶ್ರೀವೆಂಕರಮಣ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.ಮೆರವಣಿಗೆ ಆರಂಭಕ್ಕೂ ಮುನ್ನ ಗಂಗೊಳ್ಳಿ ಬಂದರು,ಮಲ್ಯರಬೆಟ್ಟು,ದಾಕುಹಿತ್ಲು,ಗುಡ್ಡೆಕೇರಿ,ಕಂಚುಗೋಡು,ಕಂಚುಗೋಡು ಖಾರ್ವಿ ಕೇರಿ ಒಟ್ಟು ಆರು ಪಂಗಡಗಳ ಹೋಳಿ ತಂಡವು ಶ್ರೀವಿರೇಶ್ವರ ದೇವಸ್ಥಾನದಲ್ಲಿ ಒಟ್ಟುಗೂಡುತ್ತದೆ.ಹೋಳಿ ಹುಣ್ಣಿಮೆ ರಾತ್ರಿಯಂದು ಪ್ರತಿಷ್ಠಾಪಿಸಿದ ಅಡಿಕೆ ಮರಕ್ಕೆ ಪೂಜೆ ಸಲ್ಲಿಸಿದ ಬಳಿಕ ಕೀಳಲಾಗುತ್ತದೆ.ನಂತರ ಹೋಳಿ ಮೆರವಣಿಗೆಗೆ ಅಧಿಕೃತವಾಗಿ ಚಾಲನೆಯನ್ನು ನೀಡಲಾಗುತ್ತದೆ.ಆರು ಪಂಗಡಗಳ ತಂಡವೂ ಒಟ್ಟಾಗಿ ಮೆರವಣಿಗೆ ಮೂಲಕ ಸಾಗುವುದು ವಾಡಿಕೆ ಆಗಿದೆ.ಶ್ರೀವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ತೀರ್ಥ ಸ್ನಾನ ಮಾಡುವುದರ ಮುಖೇನ ಹೋಳಿ ಹಬ್ಬಕ್ಕೆ ಅಧಿಕೃತವಾಗಿ ತೆರೆ ಬೀಳುತ್ತದೆ.






















































































































































































































































































































































































































































































































































































































































































































































































































































































































































































































































































































































































































































































































































































































































































