ಹಟ್ಟಿಯಂಗಡಿ:ನಂಬಿಕೆಗಳು ಧರ್ಮವನ್ನು ಕಾಪಾಡುತ್ತದೆ:ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ

ಕುಂದಾಪುರ:ಮಾ.13 ರಿಂದ ಮಾ.17 ರ ವರೆಗೆ ನಡೆಯುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿಯ ನೂತನ ದೇವಾಲಯ ಲೋಕಾರ್ಪಣೆ,ಬ್ರಹ್ಮಕಲಶೋತ್ಸವ,ಲಕ್ಷಮೋದಕ ಹೋಮ, ಶತಚಂಡಿಯಾಗ,2016 ಕಾಯಿ ಗಣಹೋಮ ಕಾರ್ಯಕ್ರಮ ನಡೆಯಲಿದ್ದು ಮಾ.13 ರಂದು ಬೆಳಿಗ್ಗೆ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಪರಮಾನುಗ್ರಹದಿಂದ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಆಗಮಿಸಿ ನೂತನ ದಏವಾಲಯದ ಲೋಕಾರ್ಪಣೆ, ಶಿಖರ ಕಲಶಸ್ಥಾಪನೆ, ಅಭಿಷೇಕ ನೆರವೇರಿಸಿದರು.

ರಾಜಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ದೇವರಿಗೆ ಬೆಳ್ಳಿ ರಥವನ್ನು ಸಮರ್ಪಿಸಿ ನಂತರ ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿ,ಇಂದು ಈ ಕ್ಷೇತ್ರವು ಸುಂದರವಾಗಿ ಮೂಡಿಬಂದು ಇಂದು ಲೋಕಾರ್ಪಣೆ ಗೊಂಡಿರುವುದು ಖುಷಿ ನೀಡಿದೆ, ಕ್ಷೇತ್ರಕ್ಕೆ ಬೆಳ್ಳಿರ ರಥವನ್ನು ಇಂದು ಸಮರ್ಪಣೆಯಾಗಿದೆ,ನಾವು ದೇವರಿಗೆ ನೀಡುವಾಗ ಪವಿತ್ರವಾದುದನ್ನೇ ನೀಡಬೇಕು ಎಂತಹ ಶ್ರೀಮಂತನೂ ಕೂಡ ಐಶಾರಾಮಿ ಕಾರುಗಳಲ್ಲಿ ಓಡಾಟ ಮಾಡಬಹುದು ಆದರೆ ರಥದಲ್ಲಿ ಓಡಾಟ ಮಾಡಲಾಗದು ಅಂತಹ ಶ್ರೇಷ್ಟವಾದ ವಾಹನ ರಥವಾಗಿದ್ದು ಅದು ಕೇವಲ ದೇವರಿಗೆ ಮಾತ್ರ,ಅಂತರಂಗ ಮತ್ತು ಬಹಿರಂಗ ದರ್ಶನ ಕೇವಲ ಭಗವಂತ ಮಾತ್ರ ಬಲ್ಲನು ಎಂದರು.

ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ,ನಿರಾಕಾರ ರೂಪನಾದ ದೇವರಿಗೆ ಮೂರ್ತಿ ರೂಪಕೊಟ್ಟು ನಾವು ಪೂಜಿಸುತ್ತೇವೆ,ನಾವು ದೇವರನ್ನು ಮೂರ್ತಿರೂಪದಲ್ಲಿ ಕಂಡು ಪೂಜೆ ಮಾಡುವ ಮೂಲಕ ಭಾವನೆಗಳಿಗನುಗುಣವಾಗಿ ದೇವರನ್ನು ಕಂಡುಕೊಳ್ಳುತ್ತಿದ್ದೇವೆ,ಅಂದು ರಾಮಚಂದ್ರ ಭಟ್ಟರ ಕಾಲದಲಿ ಈ ಕ್ಷೇತ್ರವು ತುಂಬಾ ಅಭಿವೃದ್ಧಿಯನ್ನು ಕಂಡುಕೊಂಡಿದೆ ಇಂದು ಅವರ ಪುತ್ರ ಬಾಲಚಂದ್ರ ಭಟ್ಟರ ನೇತೃತ್ವದಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಿದೆ,ಈ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಗೊಳ್ಳುವಂತಾಗಲಿ ,ನಂಬಿಕೆಗಳು ಧರ್ಮವನ್ನು ಕಾಪಾಡುತ್ತದೆ ದೇವರಲ್ಲಿ ನಂಬಿಕೆ ಇಟ್ಟಾಗ ನಮ್ಮ ಧರ್ಮಗಳು ಉಳಿಯುತ್ತದೆ ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ,ಹಟ್ಟಿಯಂಗಡಿ ಇದರ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಸಾಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ,ಉಧ್ಯಮಿ ಆನಂದ ಸಿ.ಕುಂದರ್,ಉಧ್ಯಮಿ ಸುಬ್ಬರಾವ್, ಬಗ್ವಾಡಿ ಮಹಿಷಾಮರ್ದಿನಿ ದೇವಸ್ಥಾನದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ,ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಮೊಗವೀರ,ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ಟ ಉಪಸ್ಥಿತರಿದ್ದರು.
ಈ ಸಂದರ್ಭ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಯಂಗಡಿ ಇದರ ಕಾರ್ಯದರ್ಶಿ ಶರಣ ಕುಮಾರ ಇವರನ್ನು ಗೌರವಾರ್ಪಣೆಯಲ್ಲಿ ಗೌರವಿಸಲಾಯಿತು.
ಬಾಲಚಂದ್ರ ಭಟ್ಟ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು,ಲಕ್ಷ್ಮೀ ಮಚ್ಚೀನ್ ಕಾರ್ಯಕ್ರಮ ನಿರೂಪಿಸಿದರು.

ಮಾ.14 ರಂದು ಲಕ್ಷ್ಮ ಮೋದಕ ಹವನ ಮುಂದುವರಿದು ಬೆಳಿಗ್ಗೆ 8 ರಿಂದ ಶ್ರೀ ಸೂಕ್ತ ಹವನ, ಪುರುಷಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹಾಗೂ ಹವನ ಧನ್ವತರಿ ಹವನ ಬೆಳಿಗ್ಗೆ 10 ಕ್ಕೆ ಪರಮಪೂಜ್ಯ ಶ್ರೀ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಮ್ ಇವರು ಆಗಮಿಸಿ ಶ್ರೀ ದೇವರಿಗೆ ಪೂಜೆ ನೆರವೇರಿಸಿ, ಆಶೀರ್ವಚನ, ಮಂತ್ರಾಕ್ಷತೆ ನೀಡಲಿದ್ದಾರೆ. ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಗೋಕರ್ಣ ಪರ್ತಗಾಳಿ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿ ಉಪಸ್ಥಿತರಿರುವರು.
ವರದಿ:ಜಗದೀಶ ದೇವಾಡಿಗ
ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-:9916284048






















































































































































































































































































































































































































































































































































































































































































































































































































































































































































































































































































































































































































































































































































































































































































