ಮಕ್ಕಳ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ,ಸಾರ್ವಜನಿಕರಿಂದ ಆಕ್ರೋಶ

ಕುಂದಾಪುರ:ಹೇರಿಕುದ್ರು ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ ಹಮ್ಮಿಕೊಂಡಿರುವ ಮಕ್ಕಳ ಯಕ್ಷಗಾನ ಸಪ್ತಾಹದಲ್ಲಿ ಶನಿವಾರ ರಾತ್ರಿ ಪ್ರದರ್ಶನಕ್ಕೆ ಅಡ್ಡಿ ಉಂಟುಮಾಡಿದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.ಪ್ರದರ್ಶನದ ನಡುವೆ ಯಕ್ಷಗಾನ ಸಂಘಟಕರು ಅನಿವಾರ್ಯವಾಗಿ ಪ್ರದರ್ಶನ ನಿಲ್ಲಿಸುವ ಪರಿಸ್ಥಿತಿ ಎದುರಾಗಿದ್ದ ಘಟನೆ ನಡೆದಿದೆ. ಸಾರ್ವಜನಿಕ ದೂರಿನ ಹಿನ್ನೆಲೆ ಯಲ್ಲಿ ಪೊಲೀಸರು ಯಕ್ಷಗಾನ
ಪ್ರದರ್ಶನ ನಿಲ್ಲಿಸುವಂತೆ ತಿಳಿಸಿದ್ದರಿಂದ ಅನಿವಾರ್ಯ ಕಾರಣದಿಂದ ಯಕ್ಷಗಾನ ಪ್ರದರ್ಶನ ನಿಲ್ಲಿಸಲಾಗಿದೆ.ಯಕ್ಷಗಾನ ವೇದಿಕೆಯಿಂದ ಚಿಣ್ಣರು ತೆರವು ಆಗಬೇಕೆಂದಾಗ ಪ್ರದರ್ಶನ ನೀಡುತ್ತಿದ್ದ ಮಕ್ಕಳು ಆಚ್ಚರಿ ಗೊಳಗಾದರು.ನಂತರ ಸಭಿಕರಿಗೆ ನಮಿಸಿ ವೇದಿಕೆ ತೆರವು ಗೊಳಿಸಿದರು.
ರಾತ್ರಿ 10.30ರ ತನಕ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡಿದ್ದೆವು. ಪ್ರದರ್ಶನದ ವೇಳೆ ಭಾಗವತರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿದ್ದರಿಂದ ಬದಲಿ ಭಾಗವತರ ನಿಯೋಜಿಸುವಲ್ಲಿ ಒಂದಷ್ಟು ಸಮಯ ವ್ಯಯವಾಗಿತ್ತು. ಪ್ರದರ್ಶನ 10.30 ದಾಟಿದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಆಟ ನಿಲ್ಲಿಸುವಂತೆ ಸೂಚನೆ ನೀಡಿದರು. ವಿಚಾರಿಸಿದಾಗ ಇಲ್ಲಿನ ಮಹಾಂಕಾಳಿ ದೇವಸ್ಥಾನದ ಅರ್ಚಕ ರಿಂದ ದೂರು ಬಂದಿದೆ ಎಂದು ಹೇಳಿದ್ದಾರೆ. ಯಕ್ಷಗಾನ ಪ್ರದರ್ಶನಕ್ಕೆ ರಾತ್ರಿ 1ಗಂಟೆ ತನಕ ಅವಕಾಶವಿದೆ ಎಂದು ಹೈಕೋರ್ಟ್ ಈ ಹಿಂದೆ ತೀರ್ಪಿನಲ್ಲಿ ತಿಳಿಸಿದೆ. ಆದರೆ ಇಲ್ಲಿ ವ್ಯತಿರಿಕ್ತ ಪರಿಸ್ಥಿತಿ ತಲೆದೋರಿತ್ತು.ಕಳೆದೊಂದು ವಾರದಿಂದ ನಡೆಯುತ್ತಿದ್ದ ಸಪ್ತಾಹದ ಯಕ್ಷ ಪ್ರದರ್ಶನದಲ್ಲಿ ಯಾವುದೇ ತೊಂದರೆಯಾಗಿಲ್ಲ.ಆಟ ನಿಲ್ಲಿಸುವಂತೆ ಸೂಚಿಸಿದ ಮೇರೆಗೆ ಪ್ರದರ್ಶನ ನಿಲ್ಲಿಸಿ ದ್ದೇವೆ. ಎಂದು ಸಂಘಟಕ ಮಹಾಬಲ ಹೇರಿಕುದ್ರು ತಿಳಿಸಿದ್ದಾರೆ.
ಯಕ್ಷಗಾನವನ್ನು ನಾವೆಲ್ಲರೂ ದೈವೀ ಕಲೆಯೆಂದು ನಂಬಿದವರು.ಅದರಲ್ಲೂ ಮಕ್ಕಳು ಹಲವು ದಿನಗಳ ಸಿದ್ದತೆ ಬಳಿಕ ವೇದಿಕೆ ಏರಿದ್ದರು.ಪ್ರದರ್ಶನದ ಮಧ್ಯೆ ಆಟ ನಿಲ್ಲಿಸುವಂತೆ ಒತ್ತಡ ಹೇರಿದ್ದು ಯಕ್ಷಗಾನಕ್ಕೆ ಮಾಡಿದ ಅವಮಾನ.ಬಹಳ ನೋವಾಗಿದೆ.ಇಂತಹ ಘಟನೆ ಮುಂದೆ ನಡೆಯಬಾರದು ಎಂದು ಸ್ಥಳೀಯ ನಿವಾಸಿ ಭಾಸ್ಕರ ಬಿಲ್ಲವ ಹೇರಿಕುದ್ರು ಹೇಳಿದ್ದಾರೆ.ಚಿಣ್ಣರ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.











































































































































































































































































































































































































































































































































































































































































































































































































































































































































































































































































































































































































































































































































































































































































