ಮೊವಾಡಿ:ಬಾಲ ಭವನ ಉದ್ಘಾಟನಾ ಕಾರ್ಯಕ್ರಮ
ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯಲ್ಲಿ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಸುಮಾರು 3.5 ಲಕ್ಷ.ರೂ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸುಸಜ್ಜಿತವಾದ ನೂತನ ಬಾಲ ಭವನದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಡಿಜಿಎಂ ಶ್ರೀಜೀತ್ ಬಾಲವನ್ನು ಉದ್ಘಾಟಿಸಿ ಮಾತನಾಡಿ,ಶಾಲಾ ಮಕ್ಕಳ ಕಲಿಕಾ ಚಟುವಟಿಕೆಗೆ ಬಾಲ ಭವನ ಬಹಳಷ್ಟು ಸಹಕಾರಿ ಆಗಲಿದೆ ಶಾಲೆಯತ್ತಾ ಮಕ್ಕಳು ಧಾವಿಸಿ ಬರುವಂತೆ ಪೂರಕ ವಾತಾವರಣ ನಿರ್ಮಾಣವಾಗಿದ್ದು ಮಕ್ಕಳ ಮನಸಿಗೆ ಸಂತೋಷವನ್ನು ಉಂಟುಮಾಡಲಿದೆ ಎಂದು ಶುಭಹಾರೈಸಿದರು.
ನಿವೃತ್ತ ಡಿಜಿಎಂ ಶಶಿಧರ ಐತಾಳ್ ಮಾತನಾಡಿ,ವಿದ್ಯಾಭ್ಯಾಸದ ಜತೆಗೆ ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮಕ್ಕಳಿಗೆ ಬಾಲ ಭವನ ಪೂರಕವಾಗಲಿದೆ,ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಶಾಲೆಯ ಉಳಿವಿಗೆ ಸಹಕರಿಸ ಬೇಕು.ಸರಕಾರಿ ಶಾಲೆಯಲ್ಲಿ ಓದಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಿದೆ.ಮನಸ್ಸಿಟ್ಟು ಓದಿದರೆ ಏನನ್ನು ಬೇಕಾದರು ಈ ಜಗತ್ತಿನಲ್ಲಿ ಸಾಧಿಸಬಹುದು ಸಾಧನೆಗೆ ಕೊನೆ ಇಲ್ಲಾ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ಮಾತನಾಡಿ,ಶಾಲೆಯ ಬಹು ದಿನದ ಬೇಡಿಕೆಯಾದ ಬಾಲ ಭವನದ ನಿರ್ಮಾಣದ ಕಾರ್ಯ ಇಂದು ಸಾಕಾರಗೊಂಡಿದೆ.ಮಕ್ಕಳಿಗೆ ಬಹಳಷ್ಟು ಇದರಿಂದ ಉಪಯೋಗ ಆಗಲಿದೆ ಎಂದು ಹೇಳಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಮಾತನಾಡಿ,ಸರಕಾರಿ ಶಾಲೆಗಳಿಗೆ ನೀಡುವ ಕೊಡುಗೆ ಶಾಶ್ವತವಾಗಿ ಮತ್ತು ಸ್ಮರಣೀಯವಾಗಿ ಉಳಿಯುತ್ತದೆ ಎಂದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಸಂಧ್ಯಾ ಕಾರಂತ ಮತ್ತು ಉಪಾಧ್ಯಕ್ಷ ರಾಘವೇಂದ್ರ ಶೆಟ್ಟಿಗಾರ್,ವಸಂತಿ ಐತಾಳ್,ಕೆನರಾ ಬ್ಯಾಂಕ್ ಹೆಮ್ಮಾಡಿ ಮ್ಯಾನೇಜರ್ ರೂಪೇಶ್,ನಿವೃತ್ತ ಮುಖ್ಯೋಪಾಧ್ಯಾಯಿನಿ ಜ್ಯೋತಿ ಐತಾಳ್,ಶರತ್,ಮೊವಾಡಿ ಫ್ರೆಂಡ್ಸ್ ಮತ್ತು ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯಲ್ಲಿ ಬಾಲ ಭವನ ನಿರ್ಮಾಣ ಮಾಡಲು ಪ್ರಮುಖ ಪಾತ್ರ ವಹಿಸಿದ್ದ ಕೆನರಾ ಬ್ಯಾಂಕಿನ ನಿವೃತ್ತ ಡಿಜಿಎಂ ಶಾಲೆಯ ಹಳೆ ವಿದ್ಯಾರ್ಥಿ ಶಶಿಧರ ಐತಾಳ್ ಮತ್ತು ದಂಪತಿಗಳನ್ನು ಮೊವಾಡಿ ಶಾಲೆ ಎಸ್‍ಡಿಎಂಸಿ ಸದಸ್ಯರು ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಬಾಲ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪ್ರಭಾರ ಮುಖ್ಯ ಶಿಕ್ಷಕಿ ಶರಾವತಿ ಸ್ವಾಗತಿಸಿದರು.ಸಹ ಶಿಕ್ಷಕಿ ಭಾಗಿತಥಿ ನಿರೂಪಿಸಿದರು.ದೈಹಿಕ ಶಿಕ್ಷಕ ಸಂತೋಷ್ ವಂದಿಸಿದರು.