ಕುಂದಾಪುರ-ಬೈಂದೂರು ವಲಯ ಲಾರಿ ಟೆಂಪೋ ಮಾಲೀಕರು ಚಾಲಕರ ಸಂಘದ ತುರ್ತು ಸಭೆ
ಉಡುಪಿ:ಕುಂದಾಪುರ ಮತ್ತು ಬೈಂದೂರು ವಲಯದ ಲಾರಿ ಮತ್ತು ಟೆಂಪೋ ಮಾಲಿಕರು ಹಾಗೂ ಚಾಲಕರ ಸಂಘದ ತುರ್ತು ಸಭೆ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆಗೆ ಅವರಿಗೆ ಮನವಿಯನ್ನು ನೀಡಲಾಯಿತು.
ಕುಂದಾಪುರ ಮತ್ತು ಬೈಂದೂರು ವಲಯದ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಜಂಟಿ ಅಧ್ಯಕ್ಷ ದಿವಾಕರ ಶೆಟ್ಟಿ ಮಾತನಾಡಿ,ಈ ಹಿಂದೆ ಕೆಂಪು ಕಲ್ಲು ಮತ್ತು ಮಣ್ಣು ಸಾಗಾಟ ಮಾಡಲು ಕೃಷಿ ಅಭಿವೃದ್ಧಿ ಉದ್ಧೇಶದಿಂದ 3ಎ ಅಡಿಯಲ್ಲಿ ಪರ್ಮಿಟ್ ನೀಡಿ ಕಳೆದ 5 ವರ್ಷದಿಂದ ಸರಕಾರ ಅನುಕೂಲ ಮಾಡಿಕೊಟ್ಟಿದೆ.ಪ್ರಸ್ತುತ 3ಎ ಲೈಸನ್ಸ್‍ನ್ನು ರದ್ದುಪಡಿಸಿದ್ದರಿಂದ ನಮಗೆ ಬಹಳಷ್ಟು ತೊಂದರೆ ಆಗಿದೆ.ಕಟ್ಟಡ ಸಾಮಾಗ್ರಿ ತುಂಬಿದ ಗಾಡಿಗಳನ್ನು ಹಿಡಿದು ನಮ್ಮ ಮೇಲೆ ಮತ್ತು ವಾಹನದ ಮೇಲೆ ಅನಗತ್ಯವಾಗಿ ಪ್ರಕರಣ ದಾಖಲಿಸಿ ಮಾನ ಮರ್ಯಾದೆ ಹರಾಜು ಹಾಕಲಾಗುತ್ತಿದೆ.ಸಂಕಷ್ಟದ ಪರಿಸ್ಥಿತಿಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲಾಗಿದ್ದು.3ಎ ಅಡಿಯಲ್ಲಿ ಪರ್ಮಿಟ್ ನೀಡುವ ತನಕ ಮುಷ್ಕರವನ್ನು ಕೈಬಿಡುವ ಪ್ರಶ್ನೆಯೆ ಇಲ್ಲಾ ಎಂದು ಹೇಳಿದರು.
ಸೆ.29 ರಂದು ಶುಕ್ರವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ಲಾರಿಗಳನ್ನು ನಿಲ್ಲಿಸಿ ಶಾಸ್ತ್ರಿ ಪಾರ್ಕ್ ನಿಂದ ತಾಲೂಕು ಕಛೇರಿ ತನಕ ಕಾಲ್ನಡಿಗೆಯಲ್ಲಿ ಸಾಗಿ ಎ.ಸಿ ಮತ್ತು ತಹಶೀಲ್ದಾರರಿಗೆ ಮನವಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಉಡುಪಿ ಜಿಲ್ಲಾ ರೈತ ಸಂಘದ ಪ್ರತಿನಿಧಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಮಾತನಾಡಿ,ನಮ್ಮ ಜಿಲ್ಲೆಯಲ್ಲಿ ಅನಗತ್ಯವಾಗಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ.ಕೆಂಪು ಕಲ್ಲು,ಮಣ್ಣು,ಮರಳು ಸಾಗಾಟ ಹಾಗೂ ಜೆಲ್ಲಿ ಕಲ್ಲುಗಳ ಸಾಗಾಟ ಮಾಡುವ ವಾಹನಗಳ ಮೇಲೆ ಜಿಲ್ಲಾಡಳಿತ ಅವೈಜ್ಞಾನಿಕ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿದ್ದರಿಂದ ಕೂಲಿ ಕಾರ್ಮಿಕರಿಗೆ,ಗೂಡಂಗಡಿಗಳಿಗೆ,ಕಟ್ಟಡ ಕಾರ್ಮಿಕರ ಹೊಟ್ಟೆ ಮೇಲೆ ಬರೆ ಬಿದ್ದಿದೆ.ಬಿಗಿ ಕಾನೂನನ್ನು ಸಡಿಲಗೊಳಿಸಿ ಹಿಂದಿನಂತೆ ಸಾಂಪ್ರದಾಯಿಕ ಸಾಗಾಟಕ್ಕೆ ಅವಕಾಶ ಮಾಡಿಕೊಡ ಬೇಕು.ಕೆಂಪು ಮಣ್ಣು ಸಾಗಾಟಕ್ಕೂ ನಿರ್ಬಂಧ ಹೇರಿದ್ದರಿಂದ ತೋಟದ ಕೆಲಸಕ್ಕೆ ರೈತರಿಗೆ ತೊಂದರೆ ಆಗುತ್ತಿದೆ ಎಂದರು.
ಈ ಸಂದರ್ಭ ಕುಂದಾಪುರ ಮತ್ತು ಬೈಂದೂರು ಭಾಗದ ಲಾರಿ ಮಾಲೀಕರು ಮತ್ತು ಚಾಲಕರು ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.