ಶಕ್ತಿ ಯೋಜನೆ ಲಾಭ ಖಾಸಗಿ ಬಸ್ ಗಳಲ್ಲಿಯೂ ಸಿಗುವಂತೆ ಆಗಬೇಕು -ಸಂಸದ ಬಿ.ವೈ ರಾಘವೇಂದ್ರ
ಕುಂದಾಪುರ:ಶಕ್ತಿ ಯೋಜನೆ ಪ್ರಯೋಜನ ಖಾಸಗಿ ಬಸ್‍ಗಳಲ್ಲಿಯೂ ಜನರಿಗೆ ಸಿಗುವಂತಾಗಬೇಕು.ಇದಲ್ಲದೆ ಕೆಎಸ್‍ಆರ್‍ಟಿಸಿ ಬಸ್‍ಗಳು ತುಂಬಿರುವುದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು,ಅದಕ್ಕೆ ಪರ್ಯಾಯ ವ್ಯವಸ್ಥೆ ಏನಾದರೂ ಮಾಡಲು ಸಾಧ್ಯವೇ ಎನ್ನುದನ್ನು ಸರಕಾರ ಚಿಂತಿಸಬೇಕು.ಒಳ್ಳೆಯ ಯೋಜನೆಗಳನ್ನು ಪೂರ್ವ ತಯಾರಿ ನಡೆಸಿ, ಅನುಷ್ಠಾನಗೊಳಿಸಬೇಕು ಈ ಬಗ್ಗೆ ಗಂಭೀರ ಚಿಂತನೆಯನ್ನು ರಾಜ್ಯ ಸರಕಾರ ಮಾಡಬೇಕಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.
ಹೆಮ್ಮಾಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಶಿಕ್ಷಕರ ವರ್ಗಾವಣೆಯಿಂದ ಕೆಲ ಶಾಲೆಗಳಲ್ಲಿ ಸಮಸ್ಯೆಗಳಾಗುತ್ತಿದೆ, ಪರ್ಯಾಯ ವ್ಯವಸ್ಥೆ ಮಾಡದೇ ಶಿಕ್ಷಕರ ವರ್ಗಾವಣೆ ಮಾಡುವುದು ಸರಿಯಲ್ಲ.ಈ ಬಗ್ಗೆ ರಾಜ್ಯ ಸರಕಾರ ಗಮನಕೊಡಬೇಕು ಎಂದರು.
ಕಾಲು ಸಂಕಗಳು ಇನ್ನೂ ಪೂರ್ಣಗೊಳ್ಳದಿರುವ ಕುರಿತಂತೆ ಮಾತನಾಡಿದ ಸಂಸದರು,10 ಕೋ.ರೂ. ವೆಚ್ಚದಲ್ಲಿ 102 ಕಾಲು ಸಂಕಗಳನ್ನು ಮಾಡುವ ಯೋಜನೆ ಕೈಗೊಳ್ಳಲಾಗಿತ್ತು.ಅದರಲ್ಲಿ ಕೆಲವು ಆಗಿವೆ ಒಂದಿಷ್ಟು ಬಾಕಿ ಇದೆ ಆದರೆ ಈಗಿನ ಸರಕಾರ ಎಲ್ಲ ಕಾಮಗಾರಿಗಳನ್ನು ತಡೆ ಹಿಡಿದಿದ್ದರಿಂದ ವಿಳಂಬವಾಗಿದೆ.ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದು,ಬಜೆಟ್ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.ಆ ಬಳಿಕ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
25 ಟವರ್ ಮಂಜೂರು:ಹಳ್ಳಿಹೊಳೆ,ಕಾಲ್ತೋಡು,ಹಳ್ಳಿಬೇರು ಸಹಿತ ವಿವಿಧೆಡೆಗಳಲ್ಲಿ 25 ಟವರ್‍ಗಳು ಕೇಂದ್ರದಿಂದ ಮಂಜೂರಾಗಿದ್ದು,ಆದಷ್ಟು ಬೇಗ ಅದರ ಕಾಮಗಾರಿ ಪೂರ್ಣಗೊಂಡು,ಜನರಿಗೆ ಪ್ರಯೋಜನ ಸಿಗಲಿದೆ.ಇನ್ನು 25-30 ಟವರ್‍ಗೆ ಅನುದಾನ ಸಿಗುವ ನಿರೀಕ್ಷೆಯಿದ್ದು,ಎಲ್ಲೆಲ್ಲ ಅಗತ್ಯವಿದೆಯೋ ಆ ಬಗ್ಗೆ ನಮಗೆ ಮಾಹಿತಿ ನೀಡಿ ಎಂದು ಸಂಸದರು ಇದೇ ವೇಳೆ ತಿಳಿಸಿದರು.











































































































































































































































































































































































































































































































































































































































































































































































































































































































































































































































































































































































































































































































































































































































































