ಮಾರಿಷಸ್ ದೇಶದಲ್ಲಿ ದುರಂತ:ಜಲಪಾತ ವೀಕ್ಷಣೆಗೆ ತೆರಳಿದ್ದ ಸುಳ್ಯದ ವಿದ್ಯಾರ್ಥಿ ಸಾವು

ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.ಎಂದು ತಿಳಿದು ಬಂದಿದೆ.
ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಕಲ್ಲಾಜೆಯ ಜಯಲಕ್ಷ್ಮಿ ಎಂಬವರ ಪುತ್ರ ನಂದನ ಎಸ್. ಭಟ್ (25) ಮೃತರು.ನಂದನ ಅವರು ಮಾರಿಷಸ್ ದೇಶದಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು ಅಲ್ಲಿ ಜಲಪಾತ ವೀಕ್ಷಣೆಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತದೇಹವನ್ನು ಅಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.ಘಟನೆ ಸೋಮವಾರ ನಡೆದಿದೆ ಎನ್ನಲಾಗಿದ್ದು,ಮೃತದೇಹವನ್ನು ಅಲ್ಲಿನ ಸರಕಾರಿ ವ್ಯವಸ್ಥೆ ಮೂಲಕ ಹಾಗೂ ಭಾರತ ದೇಶದ ಸರಕಾರದ ಸಹಾಯದಿಂದ ಕರೆತರಲು ವ್ಯವಸ್ಥೆ ಮಾಡುವಂತೆ ಮೃತ ಯುವಕನ ತಾಯಿಯ ತಮ್ಮ ಕಾರ್ಕಳದ ಸತ್ಯನಾರಾಯಣ ಭಟ್ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ.ಈ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ವಿದೇಶ ಸಚಿವ ಜೈಶಂಕರ್ ಅವರಿಗೆ ಮನವಿ ಮಾಡಿ ಪೂರಕ ಕ್ರಮಕ್ಕೆ ವಿನಂತಿಸಿದ್ದಾರೆ.ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರೂ ಕೂಡ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ.ನಂದನ ಅವರು ಮಾರಿಷಸ್ ನಲ್ಲಿ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಆಂಡ್ ಟೂರಿಸಮ್ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.




















































































































































































































































































































































































































































































































































































































































































































































































































































































































































































































































































































































































































































































































































































































































































