ಸ್ಕೈಡೈನಿಂಗ್ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಸಚಿವ

ಕುಂದಾಪುರ:ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು,ಇಲ್ಲಿಗೆ ಬರುವಂತೆ ಸಂಸದರು, ಶಾಸಕರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಈ ಭಾಗದ ಪ್ರವಾಸೋದ್ಯಮ ತಾಣಗಳನ್ನು ವೀಕ್ಷಿಸಲು ಬಂದಿದ್ದು,ನದಿ ಹಾಗೂ ಸಮುದ್ರದ ಸುಂದರವಾದ ವಾತಾವರಣ ಇಲ್ಲಿದೆ.ತ್ರಾಸಿ- ಮರವಂತೆಯನ್ನು ಅತ್ಯುತ್ತಮ ಪ್ರವಾಸೋದ್ಯಮ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಸ್ತೃತ ಯೋಜನೆಯೊಂದಿಗೆ ಪ್ರಸ್ತಾವನೆ ಸಲ್ಲಿಸಿದರೆ,ಒಟ್ಟಾಗಿ ಅಭಿವೃದ್ಧಿಪಡಿಸಬಹುದು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ಅವರು ಗುರುವಾರ ಸಂಜೆ ತ್ರಾಸಿ – ಮರವಂತೆ ಬೀಚ್ ಗೆ ಭೇಟಿ ನೀಡಿದ,ಸಮಯದಲ್ಲಿ ತ್ರಾಸಿ ಬೀಚ್ ನಲ್ಲಿನ ಸ್ಕೈಡೈನಿಂಗ್ ನಲ್ಲಿ ಕುಳಿತು ಪ್ರಕೃತಿ ಸೌಂದರ್ಯ ಸವಿಯುತ್ತಾ ಮಾತನಾಡಿದರು. ಸಮಗ್ರ ಅಭಿವೃದ್ಧಿ ಯೋಜನೆಗಳ ಕುರಿತಂತೆ ಪರಿಶೀಲಿಸಿ,ಸಂಸದರು, ಶಾಸಕರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ, ಪತ್ರಕರ್ತರೊಂದಿಗೆ ಚರ್ಚಿಸಿದರು.
ಒಂದೆಡೆ ಕಾಡು,ನದಿ, ಇನ್ನೊಂದೆಡೆ ಕಡಲು, ನಡುವೆ ರಾಷ್ಟ್ರೀಯ ಹೆದ್ದಾರಿಯು ಹಾದುಹೋಗುತ್ತದೆ.ಇಂತಹ ಒಳ್ಳೆಯ ಜಾಗಕ್ಕೆ ಬರಲು ತುಬಾ ಖುಷಿ ಆಗ್ತಾ ಇದೆ. ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತಮ ಅವಕಾಶಗಳನ್ನು ಹೊಂದಿವೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ,ಕೇಂದ್ರದ ಸ್ವದೇಶಿ ದರ್ಶನ್ 2.೦ ಯೋಜನೆಯಡಿ ತ್ರಾಸಿ- ಮರವಂತೆಗೆ 112 ಕೋ.ರೂ., ಪಡುವರಿ- ಸೋಮೇಶ್ವರಕ್ಕೆ 1೦೦ ಕೋ.ರೂ. ಹಾಗೂ ಕೊಲ್ಲೂರಿಗೆ ಸೇರಿದಂತೆ ಒಟ್ಟಾರೆ 3೦೦ ಕೋ.ರೂ. ಅನುದಾನ ಒದಗಿಸುವಂತೆ ಕೇಳಿದ್ದೇವೆ. ತಿಂಗಳ ಹಿಂದೆ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೆವು. ರಾಜ್ಯ ಸರಕಾರದಿಂದ ತ್ರಾಸಿ-ಮರವಂತೆ ಮತ್ತು ಪಡುವರಿ-ಸೋಮೇಶ್ವರ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸ್ವತ: ಸಚಿವರೇ ಈ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿರುವುದರಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಿದೆ ಎಂದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ ಕೆ.ವಿ., ಬಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಜಿಲ್ಲಾಽಕಾರಿ ಡಾ| ವಿದ್ಯಾ ಕುಮಾರಿ, ಕುಂದಾಪುರ ಉಪವಿಭಾಗಾಽಕಾರಿ ರಶ್ಮಿ ಎಸ್.ಆರ್., ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮತ್ತಿತರರಿದ್ದರು.