ಏಕಪವಿತ್ರ ನಾಗಮಂಡಲೋತ್ಸವ ಸಂಪನ್ನ

ಕುಂದಾಪುರ:ಆದಿ ಸುಬ್ರಹ್ಮಣ್ಯ ದೇವಸ್ಥಾನ ವಂಡಾರು ಇದರ ವಾರ್ಷಿಕೋತ್ಸವ ಅಂಗವಾಗಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಸಹಿತ
ವಂಡಾರು ಬಾಯರಿ ಕುಟುಂಬಸ್ಥರಿಂದ ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ವಂಡಾರುನಲ್ಲಿ ವಿಜೃಂಭಣೆಯಿಂದ ನಡೆಯಿತು.

ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಹಾಲಿಟ್ಟು ಸೇವೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಆದಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿದರು.
ಶೃಂಗೇರಿ ಶಾರದಾ ಪೀಠದ ದಕ್ಷಿಣ ಪ್ರಾಂತೀಯ ಧರ್ಮಾಧಿಕಾರಿ ವೇದ ಮೂರ್ತಿ ನಾಗಪಾತ್ರಿಗಳಾದ ಲೋಕೇಶ್ ಅಡಿಗ ಬಡಾಕೆರೆ ಅವರು ನಾಗದರ್ಶನ ಸೇವೆಯನ್ನು ನೆರವೇರಿಸಿದರು.
ಅಂಪಾರು ಸರ್ವೋತ್ತಮ ವೈದ್ಯರು ಮತ್ತು ಬಳಗದವರಿಂದ ಮಂಡಲ ಸೇವೆ ಜರುಗಿತು.
ಅಸಂಖ್ಯಾ ಭಕ್ತರು ಮಂಡಲ ಸೇವೆಯನ್ನು ಕಣ್ತುಂಬಿ ಕೊಂಡರು.ಹೂ ಹಣ್ಣು ಹಂಪಲುಗಳಿಂದ ಮಂಡಲದ ಚಪ್ಪರವನ್ನು ಸಿಂಗಾರ ಮಾಡಲಾಗಿತ್ತು.ವೈದಿಕರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ವಂಡಾರು ಬಾಯರಿ ಕುಟುಂಬಸ್ಥರಿಂದ ನಾಗಮಂಡಲೋತ್ಸವ ಸೇವೆ ಅದ್ದೂರಿಯಾಗಿ ಸಂಪನ್ನ ಗೊಂಡಿತು.
ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಪೂರ್ವಭಾವಿ ಅಂಗವಾಗಿ ಹೊರೆ ಕಾಣಿಕೆ ಮೆರವಣಿಗೆ,ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು.
ಅರ್ಚಕರಾದ ಸುನೀಲ್ ಕೆದ್ಲಾಯ ಅವರು ಮಾತನಾಡಿ, ಆದಿ ಸುಬ್ರಹ್ಮಣ್ಯ ದೇವಸ್ಥಾನದ ಮೊದಲ ವರ್ಷದ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ದೇವರು ಕೊಟ್ಟ ನುಡಿ ಅಂತೆ ವಂಡಾರು ರಮೇಶ್ ಬಾಯರಿ ಅವರ ನೇತೃತ್ವದಲ್ಲಿ ಸಾರ್ವಜನಿಕವಾಗಿ ಏಕಪವಿತ್ರ ನಾಗಮಂಡಲೋತ್ಸವ ಬಹಳಷ್ಟು ಅದ್ದೂರಿಯಾಗಿ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ವಂಡಾರು ಕುಟುಂಬಸ್ಥರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.