ಜನವರಿ.22 ರಿಂದ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ಆರಂಭ

ಕುಂದಾಪುರ:ಮೂರು ವರ್ಷಗಳ ಕಾಲದ ಹುಡುಕಾಟದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಶ್ರೀ ದೇವಿ ಮೂರ್ತಿ ಕೆತ್ತನೆಗೆ ಬೇಕಾದಂತಹ ರಕ್ತ ಚಂದನ ಮರ ದೊರಕಿದೆ.ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಸರಕಾರದ ನಿಯಮದ ಪ್ರಕಾರ ಮರವನ್ನು ದೇವಸ್ಥಾನದ ವತಿಯಿಂದ ಕೊಂಡುಕೊಳ್ಳಲಾಗಿದ್ದು. ಭವ್ಯ ಮೆರವಣಿಗೆಯಲ್ಲಿ ಈ ಹಿಂದೆ ಕರೆತರಲಾಗಿತ್ತು.ಶ್ರೀದೇವಿ ಮೂರ್ತಿ ಕೆತ್ತನೆ ಕಾರ್ಯ ಮುಗಿದಿದ್ದು ಬಹಳಷ್ಟು ಸುಂದರವಾಗಿ ಮೂಡಿ ಬಂದಿದೆ. ಶ್ರೀ ಭದ್ರಮಹಾಕಾಳಿ ಅಮ್ಮನವರ ಪ್ರತಿಷ್ಠಾಮಹೋತ್ಸವ ಕಾರ್ಯಕ್ರಮ ಜ.22 ರಿಂದ ಜ.24 ರ ವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಕಟ್‍ಬೇಲ್ತೂರು ಭದ್ರಮಹಾಕಾಳಿ ದೈವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷರಾದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ಅಮ್ಮನವರ ಪುನರ್ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದೈವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸುಮಾರು ಎಂಟುನೂರು ವರ್ಷಗಳಷ್ಟು ಹಳೆಯದಾದ ದೇವಿಯ ಮೂರ್ತಿಯಲ್ಲಿ ಭಿನ್ನ ಉಂಟಾಗಿದೆ ಎನ್ನುವ ವಿಚಾರ ಪ್ರಶ್ನಾಚಿಂತನೆಯ ಮುಖೇನ ಗೋಚರಿಸಿದ್ದರಿಂದ.ರಕ್ತ ಚಂದನ ಮರದಿಂದ ಹೊಸ ಬಿಂಬವನ್ನು ರಚಿಸಲಾಗಿದ್ದು.ದೈವಜ್ಞರ ಮುಖೇನ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಜ.20 ರಂದು ಹೆಮ್ಮಾಡಿ ಯಿಂದ ದೇವಿಯ ಸನ್ನಿಧಾನದ ವರೆಗೆ ಕಾಲ್ನಡಿಗೆಯಲ್ಲಿ ಪುರಮೆರವಣಿಗೆ ನಡೆಯಲಿದೆ.ಜ.21 ರಂದು ಹೊರೆಕಾಣಿಕೆ ಮೇರವಣಿಗೆ ಜರುಗಲಿದ್ದು.ಜ.24ಕ್ಕೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ಅಂದಾಜು ಹತ್ತು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.ಎಲ್ಲರ ಸಹಕಾರದಿಂದ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ದೈವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ ಮಾತನಾಡಿ,ಶ್ರೀ ದೇವಿಯ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಂಡರು.
ಶ್ರೀ ಭದ್ರಮಹಾಕಾಳಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಬಿ.ವಿಠಲ ಶೆಟ್ಟಿ ಹೆಗ್ಡೆಯವರಮನೆ,ಶ್ರೀಧರ ಶೆಟ್ಟಿ,ಮಂಜು ಶೆಟ್ಟಿ,ಶೇಖರ ಬಳೆಗಾರ್,ಕಾರ್ಯದರ್ಶಿ ಚಂದ್ರನಾಯ್ಕ್ ಉಪಸ್ಥಿತರಿದ್ದರು.ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಶಿಕ್ಷಕ ಕೆ.ಆನಂದ ಶೆಟ್ಟಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಜನವರಿ.22 ರಿಂದ ಜನವರಿ.24 ರ ತನಕ ನಡೆಯಲಿದೆ.ಧಾರ್ಮಿಕ ಸಭಾ ಕಾರ್ಯಕ್ರಮ,ಮನೋರಂಜನಾ ಕಾರ್ಯಕ್ರಮ ಜರುಗಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.