ಡಾನ್ ಬಾಸ್ಕೊ ರಜತ ಮಹೋತ್ಸವ ಸಂಭ್ರಮಕ್ಕೆ ಚಾಲನೆ,ರಜತ ಲೋಗೋ ಬಿಡುಗಡೆ





















ಕುಂದಾಪುರ:2000 ಇಸವಿಯಲ್ಲಿ ಆರಂಭಗೊಂಡಿರುವ ಡಾನ್ ಬಾಸ್ಕೊ ತ್ರಾಸಿ-ಹೊಸಾಡು ಸಂಸ್ಥೆಗೆ 25 ವರ್ಷ ತುಂಬಿರುವುದರಿಂದ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಸ್ಮರಣೀಯವಾಗಿ ಆಚರಿಸುವ ಉದ್ದೇಶದಿಂದ ರಜತ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗಿದೆ.ಇವೊಂದು ಸುಸಂದರ್ಭದಲ್ಲಿ ರಜತ ಮಹೋತ್ಸವ ವರ್ಷಾಚರಣೆ ಅಂಗವಾಗಿ ಶೈಕ್ಷಣಿಕ,ಸಾಂಸ್ಕೃತಿಕ,ಕ್ರೀಡೆ,ಸಾಮಾಜಿಕ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು.ಒಂದು ವರ್ಷಗಳ ಕಾಲ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತವೆ.2025 ರ ಡಿಸೆಂಬರ್ ತಿಂಗಳಿನಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಸಂಪನ್ನವಾಗಲಿರುವ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಆಲೋಚನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಡಾನ್ ಬಾಸ್ಕೊ ಶಾಲೆಯ ಪ್ರಿನ್ಸಿಪಾಲ್ ,ಧರ್ಮಗುರು ಮ್ಯಾಕ್ಸಿಂ ಡಿಸೋಜ ಹೇಳಿದರು.
ಶನಿವಾರ ಸಂಸ್ಥೆಯ ವಠಾರದಲ್ಲಿ ನಡೆದ ಶಾಲೆಯ ವಾರ್ಷಿಕೋತ್ಸವ ಮತ್ತು ರಜತ ಮಹೋತ್ಸವ ಸಂಭ್ರಮ ಚಾಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರೀಯ ಪಠ್ಯಕ್ರಮದ ವಿದ್ಯಾಲಯದಲ್ಲಿ ನರ್ಸರಿ ಯಿಂದ ಪಿಯುಸಿ ತನಕ ಶಿಕ್ಷಣವನ್ನು ನೀಡಲಾಗುತ್ತಿದೆ.ಒಂದೆ ಸೂರಿನಡಿ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಪದವಿ ಕಾಲೇಜನ್ನು ಆರಂಭಿಸುವ ಚಿಂತನೆಯನ್ನು ಹೊಂದಲಾಗಿದೆ.ಇಲ್ಲಿ ವ್ಯಾಸಂಗ ಮಾಡಿದ ನೂರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದು ತಮ್ಮ ಕುಟುಂಬದವರೊಂದಿಗೆ ನೆಮ್ಮದಿ ಜೀವನವನ್ನು ಕಂಡುಕೊಳ್ಳುತ್ತಿರುವುದು.ಸಂಸ್ಥೆಯ ಧ್ಯೇಯೋದ್ದೇಶ ಸಾರ್ಥಕತೆ ಕಂಡಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.65 ವಿದ್ಯಾರ್ಥಿಗಳಿಂದ ಆರಂಭಗೊಂಡಿದ್ದ ಒಂದು ಚಿಕ್ಕ ಸಂಸ್ಥೆ ಇಂದು ನಾಲ್ಕು ನೂರಕ್ಕೂ ಅಧಿಕ ಮಕ್ಕಳನ್ನು ಹೊಂದಿದ್ದು.ಊರಿನವರ ಮತ್ತು ಮಕ್ಕಳ ಪೋಷಕರ ಬೆಂಬಲದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ವಿಕಾರ್ ಜನರಲ್ ಉಡುಪಿ ಧರ್ಮಪ್ರಾಂತ್ಯ ವಿ.ರೆ.ಫಾ ಫರ್ಡಿನಾಂಡ್ ಗೊನ್ಸಾಲ್ವಿಸ್ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮದ ಲೋಗೋ ಅನಾವರಣಗೊಳಿಸಿ ಮಾತನಾಡಿ,ಉತ್ತಮ ಕಲ್ಪನೆಯೊಂದಿಗೆ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆ ಹಲವಾರು ಏಳುಬೀಳುಗಳ ನಡುವೆ ಇಂದು ಹೆಮ್ಮರವಾಗಿ ಬೆಳೆದು ನಿಂತ್ತಿದ್ದು ರಜತ ಸಂಭ್ರಮದ ಹೊಸ್ತಿಲಿನಲ್ಲಿದೆ.ರಜತ ಸಂಭ್ರಮ ವರ್ಷದಲ್ಲಿ ಹಾಕಿಕೊಂಡಿರುವ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ ಉಪ ಪ್ರಾಂತೀಯ ಪಂಜಿಮ್ ಕೊಂಕಣ ಪಾಂತ್ರ್ಯ ಫಾ.ಬಂಜೆಲಾವೊ ಟೀಕ್ಸೀರಾ (ಎಸ್.ಡಿ.ಬಿ) ಅವರು ಮಾತನಾಡಿ,ಆಧುನಿಕ ಯುಗದಲ್ಲಿ ಬದುಕನ್ನು ಸಮರ್ಥವಾಗಿ ರೂಪಿಸಿಕೊಳ್ಳಲು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದು ಅತಿ ಮುಖ್ಯವಾಗಿದೆ.ಶಿಕ್ಷಣದ ಜತೆಗೆ ಸಂಸ್ಕಾರಯುತವಾದ ಶಿಕ್ಷಣವನ್ನು ಕಲಿಸುವಲ್ಲಿ ಪೋಷಕರ ಪಾತ್ರ ಅಮೂಲ್ಯವಾದದ್ದು ಎಂದು ಹೇಳಿದರು.
ಡಾನ್ ಬಾಸ್ಕೋ ಟೆಕ್ ತ್ರಾಸಿ ಸಂಸ್ಥಾಪಕರಾದ ರೆ.ಫಾ ಮೈಕಲ್ ಮಸ್ಕರೇನ್ಹಸ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.ಸೇಂಟ್ ಜೋಸೆಫ್ ವಾಚ್ ಡೀನರಿ ಕುಂದಾಪುರ ರೆ.ಫಾ ಪಾಲ್ ರೆಗೊ,ವೈಸ್ ಪ್ರಿನ್ಸಿಪಾಲ್ ಬ್ರೈಸ್ ರೋಡ್ರಿಗಸ್,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಂತೋಷ್ ಪಾಯಸ್,ಕಾರ್ಯದರ್ಶಿ ಆಶಾ ಕರ್ವಾಲ್ಲೊ,ಕುಂದಾಪುರ ಪ್ರಾಂತ್ಯದ ಧರ್ಮಗುರುಗಳು,ಧರ್ಮ ವಗಿನಿಯರು,ಮಕ್ಕಳ ಪೋಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ವಿದ್ಯಾಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಸಂಸ್ಥೆಯ ಆಡಳಿತಾಧಿಕಾರಿ ರೋಶನ್ ಡಿಸೋಜ ಸ್ವಾಗತಿಸಿದರು.ಶಾಲಾ ನಾಯಕ ಡೆರಿಕ್ ಲೋಫೆಜ್ ಮತ್ತು ವಿದ್ಯಾರ್ಥಿ ನಾಯಕಿ ಅನುಶ್ರೀ ನಿರೂಪಿಸಿದರು.