ವಿದ್ಯಾರಣ್ಯ ಶಾಲೆಯಲ್ಲಿ ಉಚಿತ ಎನ್. ಎಂ.ಎಂ.ಎಸ್. ಕಾರ್ಯಾಗಾರ ಉದ್ಘಾಟನೆ

ಕುಂದಾಪುರ:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ,ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ- ಮತ್ಯಾಡಿ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಉಚಿತ ಎನ್. ಎಂ.ಎಂ.ಎಸ್.ತರಬೇತಿ ಕಾರ್ಯಾಗಾರ ವಿದ್ಯಾರಣ್ಯ ಶಾಲೆಯಲ್ಲಿ ನಡೆಯಿತು.ಈ ಕಾರ್ಯಾಗಾರವು ವಿದ್ಯಾರಣ್ಯ ಶಾಲೆಯ ಸಹಕಾರದೊಂದಿಗೆ ಆರು ವಾರಗಳು ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ.
ಎನ್. ಎಂ.ಎಂ.ಎಸ್.ಜಿಲ್ಲಾ ನೋಡೆಲ್ ಅಧಿಕಾರಿ ಚಂದ್ರ ನಾಯ್ಕ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳು ಕಾರ್ಯಾಗಾರದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಪ್ರಸ್ತುತ ವರ್ಷ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಬಡತನವನ್ನು ಹೊಂದಿರುವ ಪ್ರತಿಭಾನ್ವಿತ ಮಕ್ಕಳು ಬಡತನದ ಕಾರಣವಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದೆ ಮುಂದುವರಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಎನ್. ಎಂ.ಎಂ.ಎಸ್.ಯೋಜನೆಯನ್ನು ಜಾರಿಗೆ ತಂದಿದ್ದು,ಇಂದು ಈ ಯೋಜನೆಯಿಂದ ಹಲವಾರು ಪ್ರತಿಭಾನ್ವಿತ ಮಕ್ಕಳು ಶಿಕ್ಷಣವನ್ನು ಮುಂದುವರಿಸಲು ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಾತನಾಡಿ,ತರಬೇತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕಲಿಕೆಗೆ ಪೂರಕವಾಗುವ ಹಲವಾರು ತರಬೇತಿಗಳನ್ನು ಪಡೆದುಕೊಂಡು ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆ ತೋರಿದಾಗ ಉತ್ತಮ ಭವಿಷ್ಯ ಕಾಣಲು ಸಾಧ್ಯವಾಗುತ್ತದೆ.ಸರಕಾರದ ಇಂತಹ ಯೋಜನೆಗಳು ಮಕ್ಕಳ ಸರ್ವಾಂಗೀಣ ಪ್ರಗತಿಗೆ ನೆರವಾಗುತ್ತದೆ ಮತ್ತು ಯಶಸ್ವಿಗೆ ದಾರಿದೀವಿಗೆಯಾಗುತ್ತದೆ. ಹಳ್ಳಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಈ ಯೋಜನೆಯ ಹೆಚ್ಚು ಹೆಚ್ಚು ಪ್ರಯೋಜನವನ್ನು ಪಡೆಯಬೇಕು. ಮಕ್ಕಳ ಶ್ರೇಯೋಭಿವೃದ್ಧಿಗೆ ಸಹಾಯಕವಾಗುವ ಹತ್ತು ಹಲವು ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆ ಸದಾ ನೆರವು ನೀಡಲಿದೆ ಎಂದರು.
ಕುಂದಾಪುರ ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ,ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕುಂದಾಪುರದ E. C. O. ರಾಜಾ ಖಾರ್ವಿ,ಕುಂದಾಪುರ ಪ್ರೌಢ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶೇಖರ ಪೂಜಾರಿ, ಸರಕಾರಿ ಪ್ರೌಢ ಶಾಲೆ ಹೆಸ್ಕೂತ್ತೂರಿನ ಮುಖ್ಯ ಶಿಕ್ಷಕರಾದ ಅಬ್ದುಲ್ ರಹೂಫ್ ಉಪಸ್ಥಿತರಿದ್ದರು. ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ.ಸ್ವಾಗತಿಸಿ,ಕುಂದಾಪುರ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಅಜಯ್ ಕುಮಾರ್ ಶೆಟ್ಟಿ ವಂದಿಸಿದರು. ಶಿಕ್ಷಕ ಸಂತೋಷ ಕುಮಾರ್ ಕೋಟ ನಿರೂಪಿಸಿದರು.











































































































































































































































































































































































































































































































































































































































































































































































































































































































































































































































































































































































































































































































































































































































































